ಬೇಸಿಗೆಯ ಆರಂಭದಲ್ಲೇ ಬಿರು ಬಿಸಿಲು ಶುರುವಾಗಿದೆ. ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿರುವವರು ಹಲವು ಮುನ್ನೆಚ್ಚರಿಕೆಗಳನ್ನು ಅಗತ್ಯವಾಗಿ ಪಾಲಿಸಬೇಕಿದೆ. ವಿಶೇಷವಾಗಿ, ಎಲೆಕ್ಟ್ರಿಕ್ ಕಾರುಗಳು ಮತ್ತು ಬೈಕುಗಳನ್ನು ಚಾರ್ಜ್ ಮಾಡುವ ಸಂದರ್ಭದಲ್ಲಿ ವಿಶೇಷ ಕಾಳಜಿ ವಹಿಸಲೇಬೇಕು.
ನೀವು ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದೇ ಇದ್ದರೆ, ಎಲೆಕ್ಟ್ರಿಕ್ ಕಾರುಗಳು ಮತ್ತು ಬೈಕುಗಳಲ್ಲಿನ ಬ್ಯಾಟರಿಗಳು ಹಾನಿಗೊಳಗಾಗಬಹುದು. ಆದ್ದರಿಂದ ಬೇಸಿಗೆಯಲ್ಲಿ ನಿಮ್ಮ ವಾಹನಗಳನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳಲು ಪ್ರಮುಖವಾಗಿರುವ ಐದು ಸಲಹೆಗಳು ನಿಮಗಾಗಿ.
1. ಪ್ರಿ-ಕಂಡೀಷನಿಂಗ್: ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳು ಪ್ರಿ-ಕಂಡೀಷನಿಂಗ್ ವೈಶಿಷ್ಟ್ಯ ಹೊಂದಿವೆ. ಸರಳವಾಗಿ ಹೇಳುವುದಾದರೆ, ನಿಮ್ಮ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಕಾರಿನ ಕ್ಯಾಬಿನ್ ಅನ್ನು ಪೂರ್ವಭಾವಿಯಾಗಿ ಕಾಯಿಸಲು ಅಥವಾ ಪೂರ್ವ ತಂಪಾಗಿಸಲು ನಿಮಗೆ ಅನುಮತಿಸುತ್ತದೆ. ಇದು ಬಿಸಿ ಮತ್ತು ಶೀತ ಹವಾಮಾನ ಎರಡಕ್ಕೂ ಉಪಯುಕ್ತ. ಈ ವೈಶಿಷ್ಟ್ಯವು ನಿಮ್ಮ ಕಾರ್ ಕ್ಯಾಬಿನ್ ಅನ್ನು ಮೊದಲೇ ತಂಪಾಗಿಸುತ್ತದೆ. ಇದು ವಾಹನದ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಪರಿಣಾಮವಾಗಿ, ಚಾಲನೆ ತುಂಬಾ ಆರಾಮದಾಯಕವಾಗುತ್ತದೆ. ಈ ಪೂರ್ವಭಾವಿ ವೈಶಿಷ್ಟ್ಯವನ್ನು ಅಪ್ಲಿಕೇಶನ್ ಮೂಲಕ ನಿಯಂತ್ರಿಸಬಹುದು.
2. ನೆರಳಿನಲ್ಲಿ ವಾಹನ ಪಾರ್ಕಿಂಗ್: ನಿಮ್ಮ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಅಧಿಕ ಬಿಸಿಯಾಗುವುದನ್ನು ತಡೆಯಲು, ಅವುಗಳನ್ನು ನೆರಳಿನಲ್ಲಿ ನಿಲ್ಲಿಸಿ. ನೇರ ಸೂರ್ಯನ ಬೆಳಕಿನಲ್ಲಿ ಇಡಬೇಡಿ. ಎಲೆಕ್ಟ್ರಿಕ್ ಕಾರುಗಳು, ಬೈಕ್‌ಗಳನ್ನು ಮರದ ಕೆಳಗೆ, ಗ್ಯಾರೇಜ್‌ನಲ್ಲಿ ಅಥವಾ ಕನಿಷ್ಠ ನೆರಳಿನ ಪ್ರದೇಶದಲ್ಲಿ ನಿಲ್ಲಿಸಬೇಕು. ಆಗ ಮಾತ್ರ ವಾಹನದಲ್ಲಿನ ಬ್ಯಾಟರಿ ಬಿಸಿಯಾಗುವುದಿಲ್ಲ. ಪರಿಣಾಮ ವಾಹನವು ಮೈಲೇಜ್ ಚೆನ್ನಾಗಿ ನೀಡುತ್ತದೆ.
3. ಸ್ಮಾರ್ಟ್ ಚಾರ್ಜಿಂಗ್:ಬ್ಯಾಟರಿಯನ್ನು ಉತ್ತಮ ರೀತಿಯಲ್ಲಿ ಕಾಯ್ದುಕೊಳ್ಳಲು ನಿಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಶೇ 20ರಿಂದ ಶೇ 80%ವರೆಗೆ ಮಾತ್ರ ಚಾರ್ಜ್ ಮಾಡಿ. ಮೊಬೈಲ್ ಫೋನ್ಗಳಲ್ಲಂತೆ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ದೀರ್ಘಕಾಲ ಚಾರ್ಜ್ ಮಾಡಿದರೆ ಬಿಸಿಯಾಗುತ್ತದೆ. ಅಲ್ಲದೆ, ಬೇಸಿಗೆಯಲ್ಲಿ ನೀವು ದೀರ್ಘಕಾಲದವರೆಗೆ ಚಾರ್ಜ್ ಮಾಡಿದರೆ, ಬ್ಯಾಟರಿಯು ವೇಗವಾಗಿ ಡಿಸ್ಚಾರ್ಜ್ ಆಗುತ್ತದೆ. ಪರಿಣಾಮ ಅದರ ಕಾರ್ಯಕ್ಷಮತೆ ಬಹಳ ಕಡಿಮೆಯಾಗುತ್ತದೆ. ಎಲೆಕ್ಟ್ರಿಕ್ ವಾಹನಗಳಿಗೆ ಶೇ 80ರಷ್ಟು ಚಾರ್ಜ್ ಮಾಡಿದರೆ ಬ್ಯಾಟರಿ ಬ್ಯಾಕಪ್ ಚೆನ್ನಾಗಿ ಬರುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.
4. ಟೈರ್ ಪರಿಶೀಲನೆ: ಬೇಸಿಗೆಯಲ್ಲಿ ಎಲೆಕ್ಟ್ರಿಕ್ ಮತ್ತು ICE ಆಧಾರಿತ ವಾಹನಗಳ ಕಾರ್ಯಕ್ಷಮತೆ ಉತ್ತಮವಾಗಿರಲು ಅವುಗಳ ಟೈರ್ ಒತ್ತಡವನ್ನು (ಟೈರ್ಗೆ ಸರಿಯಾದ ಪ್ರಮಾಣದಲ್ಲಿ ಗಾಳಿ ತುಂಬಿಸುವುದು) ಪರಿಶೀಲಿಸಬೇಕು. ಸಾಮಾನ್ಯವಾಗಿ, ಬಿಸಿ ವಾತಾವರಣದಲ್ಲಿ ಟೈರ್ ಒಳಗೆ ಒತ್ತಡವು ಹೆಚ್ಚಾಗುತ್ತದೆ. ಆದ್ದರಿಂದ, ಟೈರ್ ಸಾಮರ್ಥ್ಯಕ್ಕೆ ಒತ್ತಡವು ಸಾಕಾಗುತ್ತದೆಯೇ ಎಂದು ನಿಯಮಿತವಾಗಿ ಪರಿಶೀಲಿಸಬೇಕು.
5. ಚಾಲನೆ ಮಾಡಿದ ತಕ್ಷಣ ಚಾರ್ಜ್ ಮಾಡಬೇಡಿ: ಎಲೆಕ್ಟ್ರಿಕ್ ವಾಹನಗಳನ್ನು ಚಾಲನೆ ಮಾಡಿದ ತಕ್ಷಣ ಚಾರ್ಜ್ ಮಾಡಬಾರದು. ಹೀಗೆ ಮಾಡುವುದರಿಂದ ಬ್ಯಾಟರಿ ಬಹುಬೇಗ ಬಿಸಿಯಾಗುತ್ತದೆ. ಅಲ್ಲದೆ, ಎಲೆಕ್ಟ್ರಿಕ್ ಕಾರುಗಳನ್ನು ನೇರ ಸೂರ್ಯನ ಬೆಳಕಿನಲ್ಲಿ ಇರಿಸುವ ಮೂಲಕ ಚಾರ್ಜ್ ಮಾಡಬಾರದು. ಎಲೆಕ್ಟ್ರಿಕ್ ವಾಹನಗಳನ್ನು ರಾತ್ರಿ ಅಥವಾ ಮುಂಜಾನೆ ಮಾತ್ರ ಚಾರ್ಜ್ ಮಾಡಬೇಕು. ಆಗ ವಾತಾವರಣ ಸ್ವಲ್ಪ ತಂಪಾಗಿರುವುದರಿಂದ ವಾಹನಗಳಿಗೆ ಯಾವುದೇ ಪರಿಣಾಮ ಆಗುವುದಿಲ್ಲ.