ವೈಯಕ್ತಿಕ ಸಾಲಗಳನ್ನು ಮಂಜೂರು ಮಾಡುವುದು ಇನ್ನು ಮುಂದೆ ಸುಲಭವಾಗಿರುವುದಿಲ್ಲ. ಏಕೆಂದರೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅವರಿಗೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಿದೆ. ಕ್ರೆಡಿಟ್ ಸ್ಕೋರ್ ಬ್ಯೂರೋಗಳು, ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಕ್ರೆಡಿಟ್ ಸ್ಕೋರ್ ತ್ವರಿತವಾಗಿ ನವೀಕರಿಸಲು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿವೆ. ಆರ್‌ಬಿಐ ರೂಪಿಸಿರುವ ಹೊಸ ಮಾರ್ಗಸೂಚಿಗಳು ಜನವರಿ 1 ರಿಂದ ಜಾರಿಗೆ ಬಂದಿವೆ.
ಪ್ರಮುಖ ಬದಲಾವಣೆಗಳೇನು?ಸಾಲ ಪಡೆಯುವಲ್ಲಿ ನಮಗೆ ಕ್ರೆಡಿಟ್ ಸ್ಕೋರ್/ಕ್ರೆಡಿಟ್ ವರದಿ ಬಹಳ ಮುಖ್ಯವಾಗಿದೆ. ಕ್ರೆಡಿಟ್ ಬ್ಯೂರೋಗಳು ಮೊದಲು ಕ್ರೆಡಿಟ್ ವರದಿಗಳನ್ನು ನವೀಕರಣ ಮಾಡಲು ಗರಿಷ್ಠ 30 ರಿಂದ 45 ದಿನಗಳನ್ನು ತೆಗೆದುಕೊಳ್ಳುತ್ತಿದ್ದವು. ಆದರೆ ಈಗ ಭಾರತೀಯ ರಿಸರ್ವ್ ಬ್ಯಾಂಕ್ RBI ಆ ಗಡುವನ್ನು ಬಹಳ ಕಡಿಮೆ ಮಾಡಿದೆ. ಹೆಚ್ಚೆಂದರೆ 15 ದಿನಗಳಲ್ಲಿ ಕ್ರೆಡಿಟ್ ವರದಿ ನವೀಕರಣ ಮಾಡುವಂತೆ ಸೂಚಿಸಿದೆ.
ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಈ ವಿಷಯದ ಬಗ್ಗೆ ಗಮನ ಹರಿಸಬೇಕು. ಅವರು ತಮ್ಮ ಗ್ರಾಹಕರ ಬಗ್ಗೆ ಕ್ರೆಡಿಟ್ ಮಾಹಿತಿಯನ್ನು ಕಾಲಕಾಲಕ್ಕೆ ಕ್ರೆಡಿಟ್ ಬ್ಯೂರೋಗಳಿಗೆ ಕಳುಹಿಸಬೇಕು. ಕ್ರೆಡಿಟ್ ಬ್ಯೂರೋಗಳು ತಮ್ಮ ಆ್ಯಪ್‌ಗಳು ಮತ್ತು ಪೋರ್ಟಲ್‌ಗಳಲ್ಲಿ ಗ್ರಾಹಕರು/ಸಾಲಗಾರರು/ಗ್ರಾಹಕರ ಕ್ರೆಡಿಟ್ ವರದಿಗಳನ್ನು ತಕ್ಷಣವೇ ನವೀಕರಿಸುತ್ತವೆ. ಅಲ್ಲದೇ, ಒಬ್ಬ ವ್ಯಕ್ತಿಗೆ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ವೈಯಕ್ತಿಕ ಸಾಲ ಪಡೆಯಲು ಕಷ್ಟವಾಗುವಂತೆ ಆರ್‌ಬಿಐ ನಿಯಮಗಳನ್ನು ಬದಲಾವಣೆ ಮಾಡಿದೆ.
ಕ್ರೆಡಿಟ್ ವರದಿ ಏಕೆ ನವೀಕರಿಸಬೇಕು?:ಕ್ರೆಡಿಟ್ ವರದಿಯನ್ನು ತಡವಾಗಿ ನವೀಕರಿಸುವುದರಿಂದ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಜನರು ಸಮಯಕ್ಕೆ ಸಾಲವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಋಣಾತ್ಮಕ ದಾಖಲೆ ಹೊಂದಿರುವವರು ತಕ್ಷಣವೇ ಸಾಲಗಳಿಗೆ ಅನುಮೋದನೆ ಪಡೆಯದಿರಬಹುದು. ಅಂತಹ ಸಂದರ್ಭಗಳನ್ನು ತಪ್ಪಿಸಲು ನವೀಕರಿಸಿದ ಕ್ರೆಡಿಟ್ ವರದಿಯನ್ನು ಹೊಂದಿರುವುದು ಬಹಳ ಮುಖ್ಯ. ಸಾಲಕ್ಕಾಗಿ ಅರ್ಜಿ ಸಲ್ಲಿಸುವವರ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಲು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಕ್ರೆಡಿಟ್ ವರದಿಯು ಮಾನದಂಡವಾಗಿ ನಿಂತಿದೆ.
ವೈಯಕ್ತಿಕ ಸಾಲಗಳ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ?:ಆರ್‌ಬಿಐನ ಹೊಸ ನಿಯಮಗಳ ಅನ್ವಯ ಒಬ್ಬ ವ್ಯಕ್ತಿಗೆ ಒಂದೇ ಬಾರಿಗೆ ಒಂದಕ್ಕಿಂತ ಹೆಚ್ಚು ಸಾಲಗಳಿಗೆ ಅರ್ಜಿ ಸಲ್ಲಿಸುವುದು ಕಷ್ಟವಾಗಿದೆ. ಪ್ರತಿ 15 ದಿನಗಳಿಗೊಮ್ಮೆ ಕ್ರೆಡಿಟ್ ವರದಿ ನವೀಕರಿಸುವುದರಿಂದ ಒಂದೇ ಬಾರಿಗೆ ಅನೇಕ ಕಡೆ ಸಾಲಕ್ಕೆ ಅಪ್ಲೈ ಮಾಡುವರಿಗೆ ಇನ್ಮುಂದೆ ಕಷ್ಟವಾಗಲಿದೆ. ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಅರ್ಜಿದಾರರ ಹಣಕಾಸಿನ ಹತೋಟಿ ಮತ್ತು ಸಾಲ ಮರುಪಾವತಿ ಮಾಡುವ ಸಾಮರ್ಥ್ಯದ ಬಗ್ಗೆ ಬೇಗನೇ ತಿಳಿದುಕೊಳ್ಳಲು ಸಹಕಾರಿ ಆಗಲಿದೆ.
ನೀವು ಅರ್ಜಿ ತಿರಸ್ಕರಿಸಿದರೆ, ಆ ಬಗ್ಗೆ ಸ್ಪಷ್ಟ ಕಾರಣ ನೀಡಬೇಕಾಗುತ್ತದೆ!:ಕೆಲವರಿಗೆ ಅವರ ಕ್ರೆಡಿಟ್ ವರದಿಗಳಲ್ಲಿ ಅನೇಕ ವಿಷಯಗಳನ್ನು ತಪ್ಪಾಗಿ ಪ್ರಕಟಿಸಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಸಂಬಂಧಪಟ್ಟ ಗ್ರಾಹಕರು ತಮ್ಮ ಕ್ರೆಡಿಟ್ ವರದಿಗಳಲ್ಲಿ ತಿದ್ದುಪಡಿ ಮಾಡಲು ಬ್ಯಾಂಕುಗಳು ಮತ್ತು ಕ್ರೆಡಿಟ್ ಬ್ಯೂರೋಗಳಿಗೆ ಅರ್ಜಿ ಸಲ್ಲಿಸುತ್ತಾರೆ. ಅಂತಹ ಅರ್ಜಿಗಳನ್ನು ಸ್ವೀಕರಿಸಿದ ನಂತರ, ಬ್ಯಾಂಕುಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆಗಳು (NBFC ಗಳು) ಅವುಗಳನ್ನು ಪರಿಶೀಲಿಸುತ್ತವೆ. ಅಪ್ಲಿಕೇಶನ್‌ಗಳಲ್ಲಿ ಉಲ್ಲೇಖಿಸಲಾದ ಸಂಗತಿಗಳು ನಿಜವೆಂದು ಕಂಡುಬಂದರೆ, ಅವರು ಕ್ರೆಡಿಟ್ ವರದಿಗಳನ್ನು ತಿದ್ದುಪಡಿ ಮಾಡಲು ಕ್ರೆಡಿಟ್ ಬ್ಯೂರೋಗಳಿಗೆ ವರದಿ ಕಳುಹಿಸುತ್ತಾರೆ. ಕೆಲವೊಮ್ಮೆ ಈ ಅರ್ಜಿಗಳನ್ನು ಬ್ಯಾಂಕುಗಳು ಮತ್ತು NBFC ಗಳು ತಿರಸ್ಕರಿಸುತ್ತವೆ. ಇನ್ನು ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಅರ್ಜಿ ತಿರಸ್ಕರಿಸಿದ ಕಾರಣವನ್ನು ಸ್ಪಷ್ಟವಾಗಿ ತಿಳಿಸುವಂತೆ ಆರ್‌ಬಿಐ ಬ್ಯಾಂಕುಗಳಿಗೆ ಸೂಚಿಸಿದೆ. ಇದರಿಂದ ಬ್ಯಾಂಕ, ಗ್ರಾಹಕರು ಮತ್ತು ಸಾಲಗಾರರಿಗೆ ಅನುಕೂಲವಾಗಲಿದೆ.
ಇದನ್ನು ಓದಿ:ಜಾಗತಿಕ ಟಾಪ್ 25 ಶಸ್ತ್ರಾಸ್ತ್ರ ರಫ್ತು ರಾಷ್ಟ್ರಗಳ ಪಟ್ಟಿಗೆ ಭಾರತವೂ ಸೇರ್ಪಡೆ: ಸಚಿವೆ ಸೀತಾರಾಮನ್