ನವದೆಹಲಿ: ಉದ್ಯೋಗಿಗಳು ವಾರದಲ್ಲಿ 90 ಗಂಟೆಗಳಷ್ಟು ಕೆಲಸ ಮಾಡಬೇಕು. ತಮ್ಮ ಭಾನುವಾರಗಳನ್ನು ಅವರು ತ್ಯಾಗ ಮಾಡಬೇಕು ಎಂಬ ಲಾರ್ಸೆಲ್ ಆ್ಯಂಡ್ ಟುಬ್ರೊ (ಎಲ್ ಆ್ಯಂಡ್ ಟಿ) ಕಂಪನಿಯ ಅಧ್ಯಕ್ಷ ಎಸ್.ಎನ್.ಸುಬ್ರಹ್ಮಣ್ಯನ್ ಅವರ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಗುರಿಯಾಗಿದೆ.
ಎಷ್ಟು ಹೊತ್ತು ಅಂತ ನೀವು ನಿಮ್ಮ ಹೆಂಡತಿಯನ್ನು ನೋಡುತ್ತೀರಾ?. ಮನೆಯಲ್ಲಿ ಕಡಿಮೆ ಸಮಯ ಕಳೆಯಿರಿ. ಕಚೇರಿಯಲ್ಲಿ ಹೆಚ್ಚು ಕಾಲ ಕಳೆಯಿರಿ ಎಂದು ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿರುವ ವಿಡಿಯೋ ಇದೀಗ ಮತ್ತೊಮ್ಮೆ ಉದ್ಯೋಗ-ಜೀವನದ ಸಮತೋಲನದ ಚರ್ಚೆ ಹುಟ್ಟು ಹಾಕಿದೆ.
ಈ ಮೊದಲು ಇನ್ಫೋಸಿಸ್ ಸಹ ಸಂಸ್ಥಾಪಕರಾಗಿದ್ದ ನಾರಾಯಣ ಮೂರ್ತಿ ಅವರು, ವಾರದಲ್ಲಿ 70 ಗಂಟೆಗಳ ಕೆಲಸ ಮಾಡುವಂತೆ ಸಲಹೆ ನೀಡಿ ಈ ಚರ್ಚೆ ಹುಟ್ಟುಹಾಕಿದ್ದರು. ಗೌತಮ್ ಅದಾನಿ ಕೂಡ 8 ಗಂಟೆಗಳಿಗಿಂತ ಹೆಚ್ಚು ಕಾಲ ನಿಮ್ಮ ಸಂಗಾತಿ ಜೊತೆಗಿದ್ದರೆ, ಅವರು ನಿಮ್ಮನ್ನು ಬಿಟ್ಟು ಹೋಗುತ್ತಾರೆ ಎಂದು ಹೇಳಿಕೆ ನೀಡಿದ್ದರು.
ಇದೀಗ ಮಾತನಾಡಿರುವ ಸುಬ್ರಹ್ಮಣ್ಯನ್, ಭಾನುವಾರದಂದು ಕೂಡ ನಿಮ್ಮನ್ನು ಕೆಲಸ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂಬ ಕುರಿತು ನನಗೆ ವಿಷಾದವಾಗುತ್ತಿದೆ. ನಿಮ್ಮನ್ನು ನಾನು ಭಾನುವಾರದಂದೂ ಕೆಲಸ ಮಾಡಿಸಲು ಸಾಧ್ಯವಾದರೆ, ನಾನು ಖುಷಿಯಾಗುತ್ತೇನೆ. ಏಕೆಂದರೆ, ನಾನು ಭಾನುವಾರ ಕೆಲಸ ಮಾಡುತ್ತೇನೆ ಎಂದು ವಿಡಿಯೋದಲ್ಲಿ ಹೇಳಿರುವ ಅವರು, ಮುಂದುವರೆದು, ಮನೆಯಲ್ಲಿ ಕುಳಿತು ಏನು ಮಾಡುತ್ತೀರಾ? ನಿಮ್ಮ ಹೆಂಡತಿಯ ಮುಖವನ್ನೇ ಎಷ್ಟು ಹೊತ್ತು ನೋಡುತ್ತೀರಾ? ಹೆಂಡತಿಯೂ ಎಷ್ಟು ಹೊತ್ತು ಗಂಡನ ಮುಖ ನೋಡಬೇಕು? ಭಾನುವಾರದಂದು ಕಚೇರಿಗೆ ಬಂದು ಕೆಲಸ ಆರಂಭಿಸಿ ಎಂದಿದ್ದಾರೆ.
ಡ್ಯಾಮೇಜ್ ಕಂಟ್ರೋಲ್: ತಮ್ಮ ಹೇಳಿಕೆ ಟೀಕೆಗೆ ಗುರಿಯಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ಎಲ್ ಆ್ಯಂಡ್ ಟಿ ಅಧ್ಯಕ್ಷರು ತಕ್ಷಣಕ್ಕೆ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದು, ದೇಶದ ಅಭಿವೃದ್ಧಿ ಸಾಧನೆಗೆ ಅತ್ಯುತ್ತಮ ಪ್ರಯತ್ನದ ಅವಶ್ಯಕತೆ ಇದೆ ಎಂಬ ಅರ್ಥದಲ್ಲಿ ನಾನು ಮಾತನಾಡಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಟೀಕೆ:ಸಾಮಾಜಿಕ ಜಾಲತಾಣದಲ್ಲಿ ಎಲ್ ಆ್ಯಂಡ್ ಟಿ ಅಧ್ಯಕ್ಷರ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: ಇದು ಕಟ್ಟಿಗೆಯ ಬೈಕ್ : ಗುಜರಿಗೆ ಹಾಕಬೇಕಿದ್ದ ಗಾಡಿಗೆ ಹೊಸರೂಪ ನೀಡಿದ ಯುವಕ!