ಮುಂಬೈ :ಭಾರತೀಯ ಷೇರು ಮಾರುಕಟ್ಟೆಯ ಮಾನದಂಡಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ ವಾರದ ಮೊದಲ ವಹಿವಾಟಿನ ದಿನದಂದು ದೊಡ್ಡ ಮಟ್ಟದ ಏರಿಕೆಯೊಂದಿಗೆ ವಹಿವಾಟು ಕೊನೆಗೊಳಿಸಿವೆ. ಸೆನ್ಸೆಕ್ಸ್ ಸೋಮವಾರ 612 ಪಾಯಿಂಟ್ ಅಥವಾ ಶೇಕಡಾ 0.75 ರಷ್ಟು ಏರಿಕೆ ಕಂಡು 81,698.11 ರಲ್ಲಿ ಕೊನೆಗೊಂಡಿದೆ. ನಿಫ್ಟಿ ಫಿಫ್ಟಿ ಕೂಡ ಇಂದಿನ ವಹಿವಾಟಿನಲ್ಲಿ 187.46 ಪಾಯಿಂಟ್ ಗಳ ಏರಿಕೆ ಕಂಡು 25,010.60 ರಲ್ಲಿ ಕೊನೆಗೊಂಡಿದೆ.
ಎಚ್ಸಿಎಲ್ ಟೆಕ್, ಹಿಂಡಾಲ್ಕೊ, ಎನ್ಟಿಪಿಸಿ, ಒಎನ್ಜಿಸಿ ಮತ್ತು ಬಜಾಜ್ ಫಿನ್ ಸರ್ವ್ ಮುಂತಾದ ಪ್ರಮುಖ ಷೇರುಗಳ ಏರಿಕೆಯೊಂದಿಗೆ ನಿಫ್ಟಿ50 ಯಲ್ಲಿ ಲಿಸ್ಟ್ ಆಗಿರುವ 50 ಷೇರುಗಳ ಪೈಕಿ 33 ಷೇರುಗಳು ಶೇಕಡಾ 4.24 ರಷ್ಟು ಏರಿಕೆ ಕಂಡಿವೆ. ಹಾಗೆಯೇ ಸೆನ್ಸೆಕ್ಸ್ನ 30 ಷೇರುಗಳ ಪೈಕಿ 21 ಷೇರುಗಳು ಶೇಕಡಾ 4 ರಷ್ಟು ಲಾಭದೊಂದಿಗೆ ಕೊನೆಗೊಂಡವು.
ನಿಫ್ಟಿ ಮಿಡ್ ಕ್ಯಾಪ್100 ಶೇಕಡಾ 0.64 ರಷ್ಟು ಏರಿಕೆಯಾಗಿದೆ. ವಲಯಗಳ ಪೈಕಿ ಐಟಿ, ಮೆಟಲ್, ರಿಯಾಲ್ಟಿ ಮತ್ತು ಒಎಂಸಿಗಳು ಶೇಕಡಾ 2.16 ರಷ್ಟು ಲಾಭ ಗಳಿಸಿವೆ.
ಸೋಮವಾರ, ಏಷ್ಯಾದ ಷೇರು ಮಾರುಕಟ್ಟೆಗಳು ಮಿಶ್ರ ಪ್ರವೃತ್ತಿಯನ್ನು ಪ್ರದರ್ಶಿಸಿದವು. ಜಪಾನ್ನ ನಿಕೈ 225 ಸೂಚ್ಯಂಕ -0.67% ಮತ್ತು ಕೊಸ್ಪಿ ಸೂಚ್ಯಂಕ -0.14% ರಷ್ಟು ಕುಸಿದಿದೆ. ಏತನ್ಮಧ್ಯೆ, ಹ್ಯಾಂಗ್ ಸೆಂಗ್ +1.05% ಮತ್ತು ಶಾಂಘೈ +0.04% ನಷ್ಟು ಕುಸಿದಿದೆ. ಮಧ್ಯಾಹ್ನದ ಹೊತ್ತಿಗೆ, ಡೋ ಜೋನ್ಸ್ ಫ್ಯೂಚರ್ಸ್ 32 ಪಾಯಿಂಟ್ ಏರಿಕೆ ಕಂಡು 41,302 ಕ್ಕೆ ತಲುಪಿದೆ.
ಯುಎಸ್ ಡಾಲರ್ ವಿರುದ್ಧ ಭಾರತೀಯ ರೂಪಾಯಿಯು ಸೋಮವಾರದಂದು 83.90 ರಲ್ಲಿ ಕೊನೆಗೊಂಡಿದೆ. ಹಿಂದಿನ ದಿನದ ವಹಿವಾಟಿನಲ್ಲಿ ಇದು 83.89 ರಲ್ಲಿ ಕೊನೆಗೊಂಡಿತ್ತು. ಆರಂಭಿಕ ವಹಿವಾಟಿನಲ್ಲಿ ರೂಪಾಯಿ ಕರೆನ್ಸಿ 83.81 ರ ಗರಿಷ್ಠ ಮಟ್ಟವನ್ನು ಮುಟ್ಟಿತ್ತು. ಅಂದರೆ ಸೋಮವಾರದಂದು ರೂಪಾಯಿ ಡಾಲರ್ ವಿರುದ್ಧ ಕೇವಲ 1 ಪೈಸೆಯಷ್ಟು ಏರಿಕೆಯಾಗಿ ಬಹುತೇಕ ಸಮತಟ್ಟಾಗಿ ವಹಿವಾಟು ನಡೆಸಿತು.
ಜಾಗತಿಕ ತೈಲ ಬೆಲೆಗಳು ಸೋಮವಾರ ಶೇಕಡಾ 1 ರಷ್ಟು ಏರಿಕೆಯಾಗಿವೆ. ಬ್ರೆಂಟ್ ಕ್ರೂಡ್ ಫ್ಯೂಚರ್ಸ್ 79 ಸೆಂಟ್ಸ್ ಅಥವಾ ಶೇಕಡಾ 1 ರಷ್ಟು ಏರಿಕೆಯಾಗಿ ಬ್ಯಾರೆಲ್ ಗೆ 79.81 ಡಾಲರ್ಗೆ ತಲುಪಿದ್ದರೆ, ಯುಎಸ್ ಕ್ರೂಡ್ ಫ್ಯೂಚರ್ಸ್ ಬ್ಯಾರೆಲ್ಗೆ 75.63 ಡಾಲರ್ಗೆ ತಲುಪಿದೆ.
ಇದನ್ನೂ ಓದಿ : 2025-26ಕ್ಕೆ 65 ಬಿಲಿಯನ್ ಡಾಲರ್ಗೆ ತಲುಪಲಿದೆ ಭಾರತದ ಜವಳಿ ರಫ್ತು: ಇನ್ವೆಸ್ಟ್ ಇಂಡಿಯಾ ವರದಿ - India textile exports