ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಅಮೆರಿಕ ಮೂಲದ ಓಹ್ಮಿಯಮ್ ಸಂಸ್ಥೆಯು ರಾಜ್ಯದಲ್ಲಿ ದೇಶದ ಪ್ರಪ್ರಥಮ ಗ್ರೀನ್ ಹೈಡ್ರೋಜನ್ ಎಲೆಕ್ಟ್ರೋಲೈಜರ್ ಗಿಗಾ ಫ್ಯಾಕ್ಟರಿ ಆರಂಭಿಸಿದೆ. ದೊಡ್ಡಬಳ್ಳಾಪುರದ ಅಪರೆಲ್ ಪಾರ್ಕ್ನಲ್ಲಿ ಕಾರ್ಖಾನೆ ಪ್ರಾರಂಭವಾಗಿದ್ದು, ಶುಕ್ರವಾರ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್ ಅವರು ಉದ್ಘಾಟನೆ ಮಾಡಿದರು.
ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ನೂತನ ಘಟಕ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ''ಕರ್ನಾಟಕದಲ್ಲಿ ಪರಿಸರ ಸ್ನೇಹಿ ಕಂಪನಿ ಆರಂಭಗೊಂಡಿರುವುದು ಸಂತಸವಾಗಿದೆ. ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಗ್ರೀನ್ ಹೈಡ್ರೋಜನ್ ಉತ್ಪಾದನೆಗೆ 18,000 ಕೋಟಿ ರೂ. ಹಣ ಮೀಸಲಿಟ್ಟಿದೆ. ಸೋಲಾರ್ ಉತ್ಪಾದನಾ ದೇಶಗಳ ಸಾರಥ್ಯವನ್ನ ಭಾರತ ವಹಿಸಿಕೊಂಡಿದೆ. ಮುಂದಿನ ಪೀಳಿಗೆಗಾಗಿ ಪ್ರಕೃತಿಯನ್ನು ಉಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ'' ಎಂದರು.
''ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ, ನಾವು ರಾಷ್ಟ್ರದ ಹಸಿರು ಶಕ್ತಿ ಗುರಿಗಳನ್ನು ಸಾಧಿಸಲು ಕೆಲಸ ಮಾಡುತ್ತಿದ್ದೇವೆ. ಕಳೆದ 10 ವರ್ಷಗಳಲ್ಲಿ ನವೀಕರಿಸಬಹುದಾದ ಶಕ್ತಿಯ ಸಾಮರ್ಥ್ಯವು ಹೆಚ್ಚಿದೆ. 2014ರಲ್ಲಿ 76 ಗಿಗಾವ್ಯಾಟ್ ನಿಂದ ಜೂನ್ 2024ರ ವೇಳೆಗೆ 195 ಗಿಗಾವ್ಯಾಟ್ವರೆಗೆ ಅಂದರೆ 2.5 ಪಟ್ಟು ಹೆಚ್ಚಾಗಿದೆ. ಸೌರ ಶಕ್ತಿ ಸಾಮರ್ಥ್ಯವು 2014ರಲ್ಲಿ 3 ಗಿಗಾವ್ಯಾಟ್ನಿಂದ 30 ಪಟ್ಟು ಜಿಗಿತ ಕಂಡಿದೆ. ಈಗ, ಪವನ ಶಕ್ತಿ ಸಾಮರ್ಥ್ಯವು 21 ಗಿಗಾವ್ಯಾಟ್ನಿಂದ 46 ಗಿಗಾವ್ಯಾಟ್ಗೆ ಏರಿದೆ. ಪರಿಸರಸ್ನೇಹಿ ಕೈಗಾರಿಕೆಗಳು ಮತ್ತು ಸ್ಥಾವರಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ'' ಎಂದು ತಿಳಿಸಿದರು.