ನವದೆಹಲಿ:ಡಿಜಿಟಲ್, ಟೆಲಿಕಾಂ, ಫಾರ್ಮಾ ಸೇರಿದಂತೆ ಹಲವು ವಲಯಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) 2023-24 ನೇ ಸಾಲಿನ ಹಣಕಾಸು ವರ್ಷದ 9 ತಿಂಗಳಲ್ಲಿ (ಏಪ್ರಿಲ್-ಡಿಸೆಂಬರ್) ಶೇಕಡಾ 13 ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
2022-23 ರ ಹಣಕಾಸು ವರ್ಷದಲ್ಲಿ ಇದೇ 9 ತಿಂಗಳ ಅವಧಿಯಲ್ಲಿ 36.74 ಬಿಲಿಯನ್ ಡಾಲರ್ ಎಫ್‌ಡಿಐ ಹೂಡಿಕೆಯಾಗಿತ್ತು. ಈ ವರ್ಷ ಅದು 32.03 ಬಿಲಿಯನ್ ಡಾಲರ್ನಷ್ಟು ಮಾತ್ರ ಹೂಡಿಕೆಯಾಗಿದೆ. ಅಂದರೆ ಶೇಕಡಾ 13 ರಷ್ಟು ಕುಂಠಿತವಾಗಿದೆ ಎಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (ಡಿಪಿಐಐಟಿ) ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.
ಆದಾಗ್ಯೂ, ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಕಳೆದ ವರ್ಷಕ್ಕಿಂತ ಶೇಕಡಾ 18 ರಷ್ಟು (11.6 ಬಿಲಿಯನ್ ಡಾಲರ್) ಏರಿಕೆ ಕಂಡಿದೆ. 2022-23 ರಲ್ಲಿ ಇದೇ ಅವಧಿಯಲ್ಲಿ 9.83 ಬಿಲಿಯನ್ ಡಾಲರ್ ವಿದೇಶಿ ಬಂಡವಾಳ ಹರಿದು ಬಂದಿತ್ತು.ಈಕ್ವಿಟಿ, ಮರುಹೂಡಿಕೆ ಮತ್ತು ಇತರ ಬಂಡವಾಳ ಸೇರಿ ಶೇಕಡಾ 7 ರಷ್ಟು ಇಳಿಕೆಯಾಗಿದೆ ಎಂದು ಅಂಕಿಅಂಶ ಹಂಚಿಕೊಂಡಿದೆ.
ಯಾವ ರಾಷ್ಟ್ರಗಳಿಂದ ನಿರಾಸಕ್ತಿ:ಸಿಂಗಾಪುರ್, ಅಮೆರಿಕ, ಇಂಗ್ಲೆಂಡ್, ಸೈಪ್ರಸ್, ಅರಬ್ ರಾಷ್ಟ್ರಗಳು ಸೇರಿದಂತೆ ಪ್ರಮುಖ ದೇಶಗಳಿಂದ ಎಫ್‌ಡಿಐ ಈಕ್ವಿಟಿ ಒಳಹರಿವು ಕಡಿಮೆಯಾಗಿದೆ. ಕಳೆದ ವರ್ಷ ಸೈಪ್ರಸ್ ರಾಷ್ಟ್ರಗಳಿಂದ 215 ಮಿಲಿಯನ್ ಡಾಲರ್, ಅರಬ್ ರಾಷ್ಟ್ರಗಳು 1.15 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದವು. ಆದರೆ, ಈ ವರ್ಷ ಕ್ರಮವಾಗಿ 215 ಮಿಲಿಯನ್ ಡಾಲರ್,796 ಮಿಲಿಯನ್ ಡಾಲರ್ಗೆ ಇಳಿಕೆ ಕಂಡಿದೆ.