ನ್ಯೂಯಾರ್ಕ್ :ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ಮೇಲಿನ ನಿರಂತರ ದಾಳಿಗಳ ಹೊರತಾಗಿಯೂ ಜಾಗತಿಕ ಕಚ್ಚಾತೈಲ ಬೆಲೆಗಳು ಏರಿಕೆಯಾಗುತ್ತಿಲ್ಲ. 2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದಾಗ ತೈಲ ಬೆಲೆ ಬ್ಯಾರೆಲ್ಗೆ 100 ಡಾಲರ್ಗೆ ಏರಿತ್ತು. ಆದರೆ ಈಗ ತೈಲ ಬೆಲೆಗಳು ಆ ಮಟ್ಟಕ್ಕೆ ಏರಿಕೆಯಾಗಿಲ್ಲ ಎಂಬುದು ಗಮನಾರ್ಹ.
ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ಮೇಲೆ ಪದೇ ಪದೆ ದಾಳಿ ನಡೆದ ನಂತರ ಯೆಮೆನ್ ನ ಹೌತಿ ನೆಲೆಗಳ ಮೇಲೆ ಯುಎಸ್ ನೇತೃತ್ವದಲ್ಲಿ ರಾಕೆಟ್ ದಾಳಿ ನಡೆಸಲಾಗಿತ್ತು. ಆ ದಾಳಿಯ ನಂತರ ಕಳೆದ ತಿಂಗಳು ತೈಲ ಬೆಲೆಗಳು ಏರಿಕೆಯಾಗಿದ್ದವು. ವಾಲ್ ಸ್ಟ್ರೀಟ್ ಬಡ್ಡಿದರಗಳು, ಯುಎಸ್ ಡಾಲರ್ ಮತ್ತು ಭೌಗೋಳಿಕ ರಾಜಕೀಯ ಕಲಹಗಳ ಕಾರಣದಿಂದ ಕಚ್ಚಾ ತೈಲ ಬೆಲೆಗಳು ಅಸ್ಥಿರವಾಗಿವೆ ಎಂದು ಸಿಎನ್ಎನ್ ವರದಿ ಮಾಡಿದೆ.
ಇಷ್ಟಾದರೂ ತೈಲ ಬೆಲೆಗಳು 2022 ರ ಗರಿಷ್ಠ ಮಟ್ಟಕ್ಕಿಂತ ಸಾಕಷ್ಟು ಕೆಳಮಟ್ಟದಲ್ಲಿವೆ. ತೈಲ ಬೆಲೆಗಳ ಯುಎಸ್ ಮಾನದಂಡವಾದ ವೆಸ್ಟ್ ಟೆಕ್ಸಾಸ್ ಇಂಟರ್ ಮೀಡಿಯೆಟ್ ಕ್ರೂಡ್ ಫ್ಯೂಚರ್ಸ್ ಗುರುವಾರ ಬ್ಯಾರೆಲ್ಗೆ 77.59 ಡಾಲರ್ನಲ್ಲಿ ಸ್ಥಿರಗೊಂಡರೆ, ಅಂತರರಾಷ್ಟ್ರೀಯ ಬೆಂಚ್ಮಾರ್ಕ್ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಬ್ಯಾರೆಲ್ಗೆ 82.86 ಡಾಲರ್ನಲ್ಲಿ ಸ್ಥಿರವಾಗಿದೆ.
ಬೇಡಿಕೆ ಕಡಿಮೆಯಾಗಿರುವುದೇ ಕಚ್ಚಾ ತೈಲ ಬೆಲೆ ಏರಿಕೆಯಾಗದಿರಲು ಪ್ರಮುಖ ಕಾರಣವಾಗಿದೆ. ಗುರುವಾರ ಬಿಡುಗಡೆಯಾದ ಅಂತರರಾಷ್ಟ್ರೀಯ ಇಂಧನ ಏಜೆನ್ಸಿಯ ಹೊಸ ಮಾಸಿಕ ವರದಿಯ ಪ್ರಕಾರ- ಜಾಗತಿಕ ಕಚ್ಚಾತೈಲ ಬೇಡಿಕೆಯ ಬೆಳವಣಿಗೆಯು 2023 ರಲ್ಲಿ ಇದ್ದ 2.3 ಮಿಲಿಯನ್ ಬಿಪಿಡಿಯಿಂದ 2024 ರಲ್ಲಿ ದಿನಕ್ಕೆ 1.2 ಮಿಲಿಯನ್ ಬ್ಯಾರೆಲ್ಗಳಿಗೆ ಇಳಿಯಲಿದೆ ಎಂದು ಮುನ್ಸೂಚನೆ ನೀಡಿದೆ. 2023 ರ ನಾಲ್ಕನೇ ತ್ರೈಮಾಸಿಕದಲ್ಲಿ ಬೇಡಿಕೆಯ ಬೆಳವಣಿಗೆಯು ಅದರ ಹಿಂದಿನ ತ್ರೈಮಾಸಿಕದಲ್ಲಿ ಇದ್ದ 2.8 ಮಿಲಿಯನ್ ಬಿಪಿಡಿಯಿಂದ 1.8 ಮಿಲಿಯನ್ ಬಿಪಿಡಿಗೆ ಇಳಿದಿರುವುದು ಗಮನಾರ್ಹ.
"ಜಾಗತಿಕ ತೈಲ ಬೇಡಿಕೆಯ ಬೆಳವಣಿಗೆಯು ವೇಗವನ್ನು ಕಳೆದುಕೊಳ್ಳುತ್ತಿದೆ" ಎಂದು ಏಜೆನ್ಸಿ ತನ್ನ ಫೆಬ್ರವರಿ ವರದಿಯಲ್ಲಿ ತಿಳಿಸಿದೆ. "ಕೊರೊನಾ ಸಾಂಕ್ರಾಮಿಕದ ನಂತರ ಜಾಗತಿಕ ತೈಲ ಬೇಡಿಕೆಯಲ್ಲಿ ಕಂಡು ಬಂದಿದ್ದ ಬೆಳವಣಿಗೆಯ ಹಂತವು ಮುಗಿದು ಹೋಗಿದೆ" ಎಂದು ಸಿಎನ್ಎನ್ ವರದಿ ಮಾಡಿದೆ.
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ನಿಧಾನಗೊಂಡಿದ್ದ ಚೀನಾದ ಆರ್ಥಿಕತೆಯು 2023 ರಲ್ಲಿ ದೊಡ್ಡ ಮಟ್ಟದ ಚೇತರಿಕೆಯನ್ನು ಕಾಣಬೇಕಿತ್ತು. ಬದಲಾಗಿ ಆಸ್ತಿ ಬಿಕ್ಕಟ್ಟು, ಕಡಿಮೆ ಬಂಡವಾಳ ವೆಚ್ಚ ಮತ್ತು ಹೆಚ್ಚಿನ ನಿರುದ್ಯೋಗದ ಕಾರಣದಿಂದ ಅಲ್ಲಿನ ಆರ್ಥಿಕತೆ ನಿಂತ ನೀರಾಗಿದೆ. ಚೀನಾದ ಆರ್ಥಿಕತೆ ಮುಂದಿನ ಕೆಲ ದಶಕಗಳವರೆಗೆ ನಿಶ್ಚಲವಾಗಿರಬಹುದು ಎಂದು ಕೆಲ ಅರ್ಥಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ : 2028ಕ್ಕೆ $100 ಬಿಲಿಯನ್ ತಲುಪಲಿದೆ ಭಾರತದ ಆಹಾರ ಸೇವಾ ಮಾರುಕಟ್ಟೆ