ನವದೆಹಲಿ: ದೆಹಲಿ ಮತ್ತು ಟೆಲ್ ಅವೀವ್ ನಡುವಿನ ನೇರ ವಿಮಾನಯಾನವನ್ನು ಮಾರ್ಚ್ 2 ರಿಂದ ಪುನರಾರಂಭಿಸುವುದಾಗಿ ಏರ್ ಇಂಡಿಯಾ ಬುಧವಾರ ಪ್ರಕಟಿಸಿದೆ. ವಿಮಾನಗಳನ್ನು ಪುನರಾರಂಭಿಸುವುದು ತನ್ನ ಅಂತಾರಾಷ್ಟ್ರೀಯ ಮಾರ್ಗಗಳನ್ನು ವಿಸ್ತರಿಸುವ ಮತ್ತು ಭಾರತ ಮತ್ತು ಇಸ್ರೇಲ್ ನಡುವಿನ ಪ್ರಯಾಣದ ಆಯ್ಕೆಗಳನ್ನು ಸುಧಾರಿಸುವ ಕಂಪನಿಯ ಪ್ರಯತ್ನಗಳ ಭಾಗವಾಗಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಬೋಯಿಂಗ್ 787-8 ಡ್ರೀಮ್ ಲೈನರ್ ವಿಮಾನ ಬಳಸಿಕೊಂಡು ಈ ಮಾರ್ಗದಲ್ಲಿ ವಾರಕ್ಕೆ ಐದು ಬಾರಿ ವಿಮಾನ ಸಂಚಾರ ನಡೆಯಲಿದೆ. ಈ ವಿಮಾನಗಳು ಬಿಸಿನೆಸ್ ಕ್ಲಾಸ್ನಲ್ಲಿ 18 ಫ್ಲಾಟ್-ಬೆಡ್ ಸೀಟುಗಳು ಮತ್ತು ಎಕಾನಮಿ ಕ್ಲಾಸ್ನಲ್ಲಿ 238 ವಿಶಾಲವಾದ ಆಸನಗಳನ್ನು ಹೊಂದಿರಲಿವೆ. ನೇರ ವಿಮಾನಯಾನ ಸೇವೆಯು ದೆಹಲಿ ಮತ್ತು ಟೆಲ್ ಅವೀವ್ ನಡುವಿನ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಏರ್ ಇಂಡಿಯಾ ಪ್ರಕಾರ, ಎಐ 139 ವಿಮಾನವು ಸೋಮವಾರ, ಮಂಗಳವಾರ, ಬುಧವಾರ, ಗುರುವಾರ ಮತ್ತು ಭಾನುವಾರ ಮಧ್ಯಾಹ್ನ 3.55 ಕ್ಕೆ (ಭಾರತೀಯ ಕಾಲಮಾನ) ದೆಹಲಿಯಿಂದ ಹೊರಟು ಸಂಜೆ 7.25 ಕ್ಕೆ (ಸ್ಥಳೀಯ ಸಮಯ) ಟೆಲ್ ಅವೀವ್ ತಲುಪಲಿದೆ. ಟೆಲ್ ಅವೀವ್ ನಿಂದ ರಾತ್ರಿ 9.10ಕ್ಕೆ ಹೊರಡುವ ವಿಮಾನ ಮರುದಿನ ಬೆಳಗ್ಗೆ 6.10ಕ್ಕೆ ದೆಹಲಿ ತಲುಪಲಿದೆ.