ನವದೆಹಲಿ : ಕ್ರಿಪ್ಟೊ ಎಕ್ಸ್ಚೇಂಜ್ ವಜೀರ್ ಎಕ್ಸ್ನಿಂದ 2 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಡಿಜಿಟಲ್ ಸಂಪತ್ತು ಕಳುವಾಗಿರುವ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ ಎಂದು ಸೈಬರ್ ಕ್ರೈಮ್ ತಜ್ಞರು ಸೋಮವಾರ ಆಗ್ರಹಿಸಿದ್ದಾರೆ.
ದೇಶದಲ್ಲಿ ಕಠಿಣವಾದ ಮನಿ ಲಾಂಡರಿಂಗ್ ವಿರೋಧಿ ನಿಯಮಗಳು ಮತ್ತು ಕ್ರಿಪ್ಟೋಕರೆನ್ಸಿಗಳಿಗೆ ತೆರಿಗೆ ವಿಧಿಸುವಿಕೆಯನ್ನು ಜಾರಿಗೆ ತಂದಿರುವ ಸಮಯದಲ್ಲಿ ಹಾಗೂ ಜಾರಿ ನಿರ್ದೇಶನಾಲಯ (ಇಡಿ)ವು ದೇಶಾದ್ಯಂತ ನಕಲಿ ಕ್ರಿಪ್ಟೋಕರೆನ್ಸಿ ದಂಧೆಗಳನ್ನು ಭೇದಿಸುತ್ತಿರುವ ಸಮಯದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಕ್ರಿಪ್ಟೊ ಆಸ್ತಿ ಕಳುವಾಗಿರುವುದು ಕಳವಳ ಮೂಡಿಸಿದೆ.
ವಜೀರ್ ಎಕ್ಸ್ನಿಂದ ಕ್ರಿಪ್ಟೊ ಆಸ್ತಿ ಕಳುವಾಗಿರುವ ವಿಚಾರದಲ್ಲಿ ನಾಲ್ಕು ಪ್ರಮುಖ ಅಂಶಗಳು ಅಡಕವಾಗಿದ್ದು, ಇವುಗಳ ಬಗ್ಗೆ ತುರ್ತಾಗಿ ತನಿಖೆ ನಡೆಯಬೇಕಿದೆ ಎಂದು ಸೈಬರ್ ಕ್ರೈಮ್ ಹಾಗೂ ಕಾನೂನು ತಜ್ಞರು ಹೇಳಿದ್ದಾರೆ.
"ಮೊದಲನೆಯದಾಗಿ, ವಜೀರ್ ಎಕ್ಸ್ನ ಯೂಸರ್ ಅಗ್ರಿಮೆಂಟ್ ಪ್ರಕಾರ- ಯಾವುದೇ ಪೂರ್ವಭಾವಿ ನೋಟಿಸ್ ನೀಡದೆ ವಜೀರ್ ಎಕ್ಸ್ ತಾನಾಗಿಯೇ ಯಾವುದೇ ಗ್ರಾಹಕರ ಖಾತೆಯನ್ನು ಅನಿರ್ದಿಷ್ಟವಾಗಿ ಅಮಾನತಿನಲ್ಲಿಡಬಹುದು ಅಥವಾ ರದ್ದುಗೊಳಿಸಬಹುದು ಹಾಗೂ ಖಾತೆಗೆ ಯಾವುದೇ ಹಣವನ್ನು ತುಂಬಿಸಲು ಆಗದಂತೆ ಅಥವಾ ಖಾತೆಯಲ್ಲಿನ ಹಣವನ್ನು ಮರಳಿ ಪಡೆಯದಂತೆ ವಜೀರ್ ಎಕ್ಸ್ ನಿರ್ಬಂಧಿಸಬಹುದು. ಆದರೆ ಇದು ಏಕಪಕ್ಷೀಯ ನಿಯಮವಾಗಿದ್ದು, ಇದು ಹೊಸ ಗ್ರಾಹಕ ಸಂರಕ್ಷಣಾ ಕಾಯ್ದೆ, 2019ರ ಉಲ್ಲಂಘನೆಯಾಗಿದೆ ಹಾಗೂ ಕಾನೂನು ಬಾಹಿರವಾಗಿದೆ" ಎಂದು ಸುಪ್ರೀಂ ಕೋರ್ಟ್ ವಕೀಲ ಮತ್ತು ಸೈಬರ್ ಕಾನೂನು ತಜ್ಞ ವಿರಾಗ್ ಗುಪ್ತಾ ಐಎಎನ್ಎಸ್ಗೆ ತಿಳಿಸಿದರು.
"ಎರಡನೆಯದಾಗಿ, ಕ್ರಿಪ್ಟೊ ಆಸ್ತಿ ಕಳುವಾದ ವಿಷಯವನ್ನು ಪೊಲೀಸರಿಗೆ ತಿಳಿಸುವಲ್ಲಿ ಗಮನಾರ್ಹ ವಿಳಂಬವಾಗಿದೆ. ಕಳುವಾಗಿರುವ ಆಸ್ತಿಯ ಮೊತ್ತ 2 ಸಾವಿರ ಕೋಟಿ ರೂಪಾಯಿಗಳಷ್ಟು ದೊಡ್ಡ ಮಟ್ಟದಲ್ಲಿರುವಾಗ ಈ ವಿಷಯವು ಹೂಡಿಕೆದಾರರು ಮತ್ತು ಆ ಎಕ್ಸ್ಚೇಂಜ್ಗೆ ಮಾತ್ರ ಸಂಬಂಧಿಸಿದ್ದು ಎಂದು ಸುಮ್ಮನೆ ಕೂರಲಾಗುವುದಿಲ್ಲ. ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಹೊಸ ಬಿಎನ್ಎಸ್ (ಭಾರತೀಯ ನ್ಯಾಯ ಸಂಹಿತಾ) ಸಂಹಿತೆಯ ನಿಬಂಧನೆಗಳ ಪ್ರಕಾರ, ಸರಿಯಾದ ಪ್ರಕ್ರಿಯೆಯನ್ನು ನಿರ್ವಹಿಸಲು ಇತರ ಕಾನೂನು ಜಾರಿ ಅಧಿಕಾರಿಗಳು ಮತ್ತು ಪೊಲೀಸರಿಗೆ ಮಾಹಿತಿ ನೀಡುವುದು ಎಕ್ಸ್ಚೇಂಜ್ನ ಕರ್ತವ್ಯವಾಗಿದೆ" ಎಂದು ಗುಪ್ತಾ ಹೇಳಿದರು.