ನವದೆಹಲಿ : ಬಿಟಿ ಹತ್ತಿಯ ಬಿತ್ತನೆಯಿಂದ ಇಳುವರಿಯು ಎಕರೆಗೆ 3 ರಿಂದ 4 ಕ್ಷಿಂಟಲ್ಗಳಷ್ಟು ಹೆಚ್ಚಾಗಿದ್ದು, ಆ ಮೂಲಕ ರೈತರ ಆದಾಯವೂ ಹೆಚ್ಚಾಗಿದೆ ಹಾಗೂ ಕಾಯಿಕೊರಕ ಹುಳುವಿನ ಬಾಧೆಯ ತಡೆಗೆ ಕೀಟನಾಶಕಗಳ ವೆಚ್ಚ ಕಡಿಮೆಯಾಗಿದೆ ಎಂದು ಐಸಿಎಆರ್-ಸಿಐಸಿಆರ್ ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ರಾಮನಾಥ್ ಠಾಕೂರ್ ಲೋಕಸಭೆಗೆ ಮಾಹಿತಿ ನೀಡಿದರು.
ಸೂಕ್ತ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರೊಂದಿಗೆ ಮಳೆಯಾಶ್ರಿತ ಪ್ರದೇಶಗಳಲ್ಲಿ ಬಿಟಿ ಹತ್ತಿಯ ಪ್ರಸ್ತುತ ನಿವ್ವಳ ಆದಾಯ ಪ್ರತಿ ಹೆಕ್ಟೇರ್ ಗೆ 25,000 ರೂ ಎಂದು ಅಂದಾಜಿಸಲಾಗಿದೆ. ಬಿಟಿ ಹತ್ತಿಯನ್ನು ರೈತರು ವ್ಯಾಪಕವಾಗಿ ಅಳವಡಿಸಿಕೊಂಡಿದ್ದು, ಪ್ರಸ್ತುತ ಹತ್ತಿ ಕೃಷಿಯ ಶೇಕಡಾ 96 ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬಿಟಿ ಹತ್ತಿ ಬೆಳೆಯಲಾಗುತ್ತಿದೆ ಎಂದು ಅವರು ತಿಳಿಸಿದರು.
ನಾಗ್ಪುರದ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್) - ಸೆಂಟ್ರಲ್ ಇನ್ ಸ್ಟಿಟ್ಯೂಟ್ ಫಾರ್ ಕಾಟನ್ ರಿಸರ್ಚ್ (ಸಿಐಸಿಆರ್) 2012-13 ಮತ್ತು 2013-14ರ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಬಿಟಿ ಹತ್ತಿಯ ಬಿತ್ತನೆಯ ಫಲಿತಾಂಶಗಳ ಮೌಲ್ಯಮಾಪನಕ್ಕಾಗಿ ಅಧ್ಯಯನ ನಡೆಸಿದೆ. ಅಲ್ಲದೇ ಬಿಟಿ ಹತ್ತಿಯ ಬಿತ್ತನೆಯಿಂದ ಮಣ್ಣಿನ ಮೇಲಾಗುವ ಪರಿಣಾಮಗಳ ಬಗ್ಗೆಯೂ ಐಸಿಎಆರ್ - ಸಿಐಸಿಆರ್ ಅಧ್ಯಯನ ಮಾಡಿದೆ.
ಸಮೀಕ್ಷೆಯ ಅವಧಿಯಲ್ಲಿ, ಹತ್ತಿಗೆ ಕಾಯಿಕೊರಕ ಕೀಟದ ಬಾಧೆ ತೀವ್ರವಾಗಿ ಕಡಿಮೆಯಾಗಿರುವುದು ಕಂಡು ಬಂದಿದ್ದು, ಕೀಟನಾಶಕಗಳ ಬಳಕೆಯ ಸಂಖ್ಯೆ ಎಂಟರಿಂದ ನಾಲ್ಕಕ್ಕೆ ಇಳಿಕೆಯಾಗಿದೆ. ಇದಲ್ಲದೆ, ಬಿಟಿ ಹತ್ತಿಯ ಬಿತ್ತನೆಯಿಂದ ಮಣ್ಣಿನ ಪೋಷಕಾಂಶಗಳ ಮೇಲೆ ಯಾವುದೇ ಪ್ರತಿಕೂಲ ಪರಿಣಾಮವಾಗಿಲ್ಲ ಎಂಬುದು ಐಸಿಎಆರ್ - ಸಿಐಸಿಆರ್ ಅಧ್ಯಯನದಲ್ಲಿ ತಿಳಿದು ಬಂದಿದೆ.