ನವದೆಹಲಿ: ರೈಲ್ವೆ ಸಚಿವಾಲಯದ ಒಟ್ಟು 6,456 ಕೋಟಿ ರೂ. ಗಳ ಅಂದಾಜು ವೆಚ್ಚದ ಮೂರು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಯು ಬುಧವಾರ ಅನುಮೋದನೆ ನೀಡಿದೆ. ಈ ಯೋಜನೆಗಳ ನಿರ್ಮಾಣದ ಸಮಯದಲ್ಲಿ ಸುಮಾರು 114 ಲಕ್ಷ ಮಾನವ-ದಿನಗಳವರೆಗೆ ನೇರ ಉದ್ಯೋಗ ಸೃಷ್ಟಿಯಾಗಲಿವೆ.
ಈ ಮೂರು ಯೋಜನೆಗಳು ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಛತ್ತೀಸ್ ಗಢದ ಏಳು ಜಿಲ್ಲೆಗಳನ್ನು ಒಳಗೊಂಡಿವೆ ಮತ್ತು ಭಾರತೀಯ ರೈಲ್ವೆಯ ಜಾಲವನ್ನು ಸುಮಾರು 300 ಕಿ.ಮೀ.ಗಳಷ್ಟು ಹೆಚ್ಚಿಸುತ್ತವೆ. ಈ ಯೋಜನೆಗಳ ಅಡಿಯಲ್ಲಿ ಬಹು ಮಾದರಿ ಸಂಪರ್ಕಕ್ಕಾಗಿ ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ನ ಭಾಗವಾಗಿ 14 ಹೊಸ ನಿಲ್ದಾಣಗಳನ್ನು ನಿರ್ಮಿಸಲಾಗುವುದು. ಇದು ಎರಡು ಪ್ರಮುಖ ಜಿಲ್ಲೆಗಳಾದ ನುವಾಪಾಡಾ ಮತ್ತು ಪೂರ್ವ ಸಿಂಗ್ ಬುಮ್ಗಳಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ.
"ಹೊಸ ರೈಲು ಮಾರ್ಗ ಯೋಜನೆಗಳು ಸರಿಸುಮಾರು 1,300 ಗ್ರಾಮಗಳು ಮತ್ತು ಸುಮಾರು 11 ಲಕ್ಷ ಜನಸಂಖ್ಯೆಗೆ ಸಂಪರ್ಕವನ್ನು ಒದಗಿಸುತ್ತವೆ. ಮಲ್ಟಿ ಟ್ರ್ಯಾಕಿಂಗ್ ಯೋಜನೆಯು ಸುಮಾರು 1,300 ಗ್ರಾಮಗಳು ಮತ್ತು ಸುಮಾರು 19 ಲಕ್ಷ ಜನಸಂಖ್ಯೆಗೆ ಸಂಪರ್ಕವನ್ನು ಹೆಚ್ಚಿಸುತ್ತದೆ" ಎಂದು ಸಿಸಿಇಎ ಹೇಳಿಕೆಯಲ್ಲಿ ತಿಳಿಸಿದೆ.