ನವದೆಹಲಿ: ದೇಶದ ಅತಿ ದೊಡ್ಡ ವ್ಯಾಪಾರಿ ಮಂಡಳಿಯಾಗಿರುವ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಸಮೀಕ್ಷೆ ನಡೆಸಿದಂತೆ, ದೇಶದಲ್ಲಿ ಜನವರಿ 15ರಿಂದ ಜೂನ್ 15ರವರೆಗೆ ಸರಿಸುಮಾರು 42 ಲಕ್ಷ ಮದುವೆ ನಡೆಯಲಿದೆ. ಈ ಮದುವೆ ಸಂಬಂಧಿತ ಖರೀದಿ ಮತ್ತು ಸೇವೆಗಳಿಂದಾಗಿ 5.5 ಲಕ್ಷ ಕೋಟಿ ರೂ ಮೊತ್ತದ ವಹಿವಾಟು ನಡೆಯಲಿದೆ.
ಸಿಎಐಟಿ ದೇಶದ ವಿವಿಧ ರಾಜ್ಯಗಳ 30 ನಗರದಲ್ಲಿ ಸಮೀಕ್ಷೆ ನಡೆಸಿದೆ. ದೇಶದ ಆರ್ಥಿಕತೆಯಲ್ಲಿ ಮದುವೆ ಸೀಸನ್ ಗಮನಾರ್ಹ ಭಾಗ. ಇದು ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ಹೊಂದಿದೆ ಎಂದು ಸಿಎಐಟಿ ಹೇಳುತ್ತದೆ. ಇದೇ ಕಾರಣದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಕೂಡ ಡೆಸ್ಟಿನೇಷನ್ ಮದುವೆಗಳಿಗೆ ಭಾರತವನ್ನೇ ಆಯ್ಕೆ ಮಾಡಿ ಎಂದು ಈ ಹಿಂದೆ ಮನವಿ ಮಾಡಿದ್ದರು.
ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ.ಭಾರ್ಟಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂದೇಲ್ವಾಲ್ ಮಾತನಾಡಿ, "ಈ ಅವಧಿಯಲ್ಲಿ ದೆಹಲಿಯಲ್ಲಿ 4 ಲಕ್ಷ ಮದುವೆಗಳು ನಡೆಯಲಿವೆ. ಸರಿಸುಮಾರು 1.5 ಲಕ್ಷ ಕೋಟಿ ರೂ ಆದಾಯ ಸೃಷ್ಟಿಯಾಗಲಿದೆ. ಕಳೆದ ವರ್ಷದ ಮದುವೆ ಸೀಸನ್ನಲ್ಲಿ 35 ಲಕ್ಷ ಮದುವೆಗಳು ದೇಶದಲ್ಲಿ ನಡೆದಿದ್ದು, 4.25 ಲಕ್ಷ ಕೋಟಿ ರೂ ವಹಿವಾಟು ನಡೆದಿದೆ" ಎಂದರು.
ಮದುವೆ ಸೀಸನ್ನಲ್ಲಿ ಒಂದು ಮದುವೆಗೆ ಅಂದಾಜು 3 ಲಕ್ಷ ರೂ ವಹಿವಾಟಿನಂತೆ 3 ಲಕ್ಷ ಮದುವೆ ನಡೆಯಲಿದೆ. ಪ್ರತಿ ಮದುವೆಗೆ 6 ಲಕ್ಷ ರೂ.ದಂತೆ ವಹಿವಾಟು ನಡೆಸುವ 10 ಲಕ್ಷ ಮದುವೆಗಳು ಜರುಗಲಿವೆ. ಪ್ರತಿ ಮದುವೆಗೆ 10 ಲಕ್ಷ ರೂ ಬಜೆಟ್ ಹೊಂದಿರುವ 10 ಲಕ್ಷ ಮದುವೆ ಮತ್ತು 15 ಲಕ್ಷದ ಬಜೆಟ್ ಹೊಂದಿರುವ 10 ಲಕ್ಷ ಮದುವೆಗಳು ನಡೆಯಲಿವೆ.
ಹೈ ಬಜೆಟ್ ಮದುವೆ ಎಂದು ಗುರುತಿಸಲಾಗುವ ಮದುವೆಗಳಲ್ಲಿ ಪ್ರತಿ ವಿವಾಹಕ್ಕೆ 25 ಲಕ್ಷ ರೂ.ಯಂತೆ ವ್ಯಯಿಸುವ 60 ಸಾವಿರ ಮದುವೆ ಮತ್ತು 1 ಕೋಟಿ ರೂ ವ್ಯಯಿಸುವ 40 ಸಾವಿರ ಮದುವೆಗಳು ಕೂಡ ಇದೇ ಅವಧಿಯಲ್ಲಿ ನಡೆಯಲಿದೆ. ಒಟ್ಟು ಈ ಆರು ತಿಂಗಳ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಮದುವೆ ಸಂಬಂಧಿತ ಖರೀದಿಯಿಂದ ಸರಿಸುಮಾರು 5.5 ಲಕ್ಷ ಕೋಟಿ ರೂ ವಹಿವಾಟು ನಡೆಯಲಿದೆ.
ಮದುವೆ ಸೀಸನ್ಗಳು ಅನೇಕ ಉದ್ಯಮಗಳಿಗೆ ಭರಪೂರ ಅವಕಾಶವನ್ನು ಒದಗಿಸುತ್ತವೆ ಎಂದು ಸಿಎಐಟಿ ಕಾರ್ಯದರ್ಶಿ ತಿಳಿಸಿದರು. ದೇಶದೆಲ್ಲೆಡೆ ಮದುವೆ ಸಂಬಂಧಿತ ಸರಕುಗಳ ದಾಸ್ತಾನನ್ನು ವ್ಯಾಪಾರಿಗಳು ಹೊಂದಿದ್ದು, ಗ್ರಾಹಕರ ಬೇಡಿಕೆಯನ್ನು ತಲುಪಲು ಕಾರ್ಯನಿರ್ವಹಿಸುತ್ತವೆ. ಪ್ರತಿ ಮದುವೆಯಲ್ಲಿ ವಧು ಮತ್ತು ವರ ಎರಡೂ ಕಡೆಯಿಂದ ಹೆಚ್ಚೂ ಕಮ್ಮಿ ಶೇ.20ರಷ್ಟು ಖರ್ಚು ವೆಚ್ಚ ಆಗುತ್ತದೆ. ಉಳಿದ 80ರಷ್ಟು ಪ್ರಮಾಣ ಮದುವೆ ವ್ಯವಸ್ಥೆಯಲ್ಲಿ ತೊಡಗುವ ಥರ್ಡ್ ಪಾರ್ಟಿ ಏಜೆನ್ಸಿಗೆ ಹೋಗುತ್ತದೆ.
ಮದುವೆ ಜೊತೆಗೆ ಬೆಳೆಯುವ ಉದ್ಯಮಗಳು: ಮದುವೆ ಸೀಸನ್ಗೆ ಮೊದಲು ಗಣನೀಯ ಪ್ರಮಾಣದ ಮೊತ್ತ ಮನೆ ದುರಸ್ಥಿ ಮತ್ತು ಪೇಂಟಿಂಗ್‌ಗೆ ಹೋಗುತ್ತದೆ. ಆಭರಣ, ಸೀರೆ, ಲೆಹಂಗಾ, ಪಿಠೋಪಕರಣ, ರೆಡಿಮೇಡ್ ಗಾರ್ಮೆಂಟ್ಸ್, ಬಟ್ಟೆ ಪಾದರಕ್ಷೆ, ಆಮಂತ್ರಣ ಪತ್ರಿಕೆ, ಡ್ರೈ ಫ್ರೂಟ್ಸ್, ಸಿಹಿ ಮತ್ತು ಹಣ್ಣು, ಪೂಜಾ ಸಾಮಗ್ರಿ, ಆಹಾರ ಸಾಮಗ್ರಿ, ಗೃಹೋಪಯೋಗಿ ವಸ್ತುಗಳೂ ಸೇರಿದಂತೆ ಇನ್ನಿತರ ಅಲಂಕಾರಿಕ ವಸ್ತುಗಳು, ಎಲೆಕ್ಟ್ರಾನಿಕಲ್ ವಸ್ತುಗಳು, ಇನ್ನಿತರ ಉಡುಗೊರೆಗಳಿಗೆ ಅಧಿಕ ಬೇಡಿಕೆ ಸೃಷ್ಟಿಸುತ್ತದೆ.
ಈಗಾಗಲೇ ದೇಶದೆಲ್ಲೆಡೆ ಬಾಂಕ್ವೆಟ್ ಹಾಲ್, ಹೋಟೆಲ್, ಓಪನ್ ಲಾನ್ಸ್, ಸಮುದಾಯ ಕೇಂದ್ರ, ಸಾರ್ವಜನಿಕ ಪಾರ್ಕ್, ಫಾರ್ಮ್ ಹೌಸ್ ಸೇರಿದಂತೆ ಇತರೆ ಮದುವೆ ತಾಣಗಳ ಬುಕ್ಕಿಂಗ್ ನಡೆದಿದೆ. ವಸ್ತುಗಳ ಖರೀದಿಯ ಹೊರತಾಗಿ ಈ ಸಮಯದಲ್ಲಿ ಹೆಚ್ಚಿನ ಬೇಡಿಕೆ ಇರುವ ಉದ್ಯಮಗಳೆಂದರೆ ಟೆಂಟ್, ಹೂವಿಕ ಅಲಂಕಾರ, ಊಟದ ಸೇವೆ, ಟ್ರಾವೆಲ್, ಕ್ಯಾಬ್ ಸೇವೆಗಳು. ವೃತ್ತಿಪರ ಸ್ವಾಗತಗಾರರ ಗುಂಪು, ತರಕಾರಿ ಮಾರಾಟಗಾರರು, ಫೋಟೋಗ್ರಾಫರ್ಸ್, ವಿಡಿಯೋಗ್ರಾಫರ್ಸ್, ಬ್ಯಾಂಡ್, ಸಂಗೀತ, ಡಿಜೆ ಸೇವೆ, ಮದುವೆಗಳಿಗೆ ಮೆರವಣಿಗೆಗೆ ಕುದುರೆ, ಲೈಟಿಂಗ್ ಸೇರಿದಂತೆ ಹಲವು ಸೇವೆಗಳು ಈ ಸಮಯದಲ್ಲಿ ಹೆಚ್ಚು ವಹಿವಾಟು ನಡೆಯುತ್ತದೆ. ಇನ್ನು ಇತ್ತೀಚಿನ ದಿನದಲ್ಲಿ ಹೆಚ್ಚುವರಿಯಾಗಿ ಇವೆಂಟ್ ಮ್ಯಾನೇಜ್ಮೆಂಟ್, ಮದುವೆ ಸರಕು ಮತ್ತು ಉಡುಗೊರೆಯನ್ನು ಪ್ಯಾಕಿಂಗ್ ಉದ್ಯಮವೂ ಕೂಡ ಸಾಕಷ್ಟು ಪ್ರಾಮುಖ್ಯತೆ ಪಡೆದಿವೆ. ಸಮೀಕ್ಷೆ ಹೇಳುವಂತೆ ಮದುವೆ ಸೀಸನ್ ಸೇವಾ ವಲಯದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುತ್ತದೆ.
ಇದನ್ನೂ ಓದಿ: ತಾಜ್‌ಮಹಲ್, ಮಧುರಾ, ಬೃಂದಾವನದಲ್ಲಿ 'ಡೆಸ್ಟಿನೇಷನ್ ವೆಡ್ಡಿಂಗ್'ಗೆ ಅವಕಾಶ? ಯುಪಿ ಸರ್ಕಾರದಿಂದ ಭರ್ಜರಿ ಪ್ಲಾನ್