ನವದೆಹಲಿ: ಜೂನ್ ಕೊನೆಗೆ ನಾಲ್ಕನೇ ಸುತ್ತಿನ ಹರಾಜಿನಲ್ಲಿ ಸುಮಾರು 20 ಪ್ರಮುಖ ಖನಿಜ ನಿಕ್ಷೇಪಗಳ ಗಣಿಗಳನ್ನು ಸರಕಾರ ಮಾರಾಟಕ್ಕಿಡಲಿದೆ ಎಂದು ಗಣಿ ಕಾರ್ಯದರ್ಶಿ ವಿ.ಎಲ್.ಕಾಂತರಾವ್ ಸೋಮವಾರ ತಿಳಿಸಿದರು. ಮೊದಲ ಸುತ್ತಿನಲ್ಲಿ ಮಾರಾಟಕ್ಕಿಡಲಾದ ಏಳು ಪ್ರಮುಖ ಖನಿಜ ನಿಕ್ಷೇಪ ಗಣಿಗಳ ಹರಾಜು ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಇದರ ಫಲಿತಾಂಶವನ್ನು ಒಂದು ತಿಂಗಳೊಳಗೆ ಘೋಷಿಸಲಾಗುವುದು ಎಂದು ಅವರು ಹೇಳಿದರು.
ತಾಮ್ರ, ಲಿಥಿಯಂ, ನಿಕ್ಕಲ್, ಕೋಬಾಲ್ಟ್ ಮತ್ತು ಅಪರೂಪದ ಭೂಮಿಯ ನಿಕ್ಷೇಪಗಳಂಥ ಪ್ರಮುಖ ಖನಿಜಗಳು ವೇಗವಾಗಿ ಬೆಳೆಯುತ್ತಿರುವ ಇಂದಿನ ಶುದ್ಧ ಇಂಧನ ತಂತ್ರಜ್ಞಾನಗಳ ಅಭಿವೃದ್ಧಿಗೆ ಅಗತ್ಯ ಘಟಕಗಳಾಗಿವೆ. ವಿಂಡ್ ಟರ್ಬೈನ್ಗಳು ಮತ್ತು ವಿದ್ಯುತ್ ಜಾಲಗಳಿಂದ ಎಲೆಕ್ಟ್ರಿಕ್ ವಾಹನಗಳ ಉದ್ಯಮದವರೆಗೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಈ ಖನಿಜಗಳು ಅಗತ್ಯವಾಗಿವೆ. ಹಸಿರು ಇಂಧನ ಪರಿವರ್ತನೆಗಳು ವೇಗವನ್ನು ಪಡೆಯುವುದರೊಂದಿಗೆ ಈ ಖನಿಜಗಳಿಗೆ ಬೇಡಿಕೆ ವೇಗವಾಗಿ ಬೆಳೆಯುತ್ತಿದೆ.
ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾವ್, "ಗಣಿಗಾರಿಕೆಯ ಬಗ್ಗೆ ಹೇಳುವುದಾದರೆ ನಾವು ಸಾಕಷ್ಟು ಗಣಿಗಳನ್ನು ಹರಾಜು ಮಾಡಿದ್ದೇವೆ. ಪ್ರಮುಖ ಖನಿಜಗಳ 38 ಬ್ಲಾಕ್ಗಳನ್ನು ಹರಾಜಿಗೆ ಇಟ್ಟಿದ್ದೇವೆ. ಜೂನ್ ಅಂತ್ಯದಲ್ಲಿ ಮುಂದಿನ ಹರಾಜು ನಡೆಯಲಿದೆ ಮತ್ತು ಈ ಹರಾಜು ಪ್ರಕ್ರಿಯೆ ಮುಂದುವರಿಯುತ್ತದೆ" ಎಂದು ವಿವರಿಸಿದರು.