ಅಮರಾವತಿ (ಆಂಧ್ರಪ್ರದೇಶ) :ಆಂಧ್ರಪ್ರದೇಶ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆ ಉಂಟಾಗುತ್ತಿದೆ. ಪಕ್ಷದಲ್ಲಿನ ಇತ್ತೀಚೆಗಿನ ಬೆಳವಣಿಗೆಗಳಿಂದ ಬೇಸತ್ತಿರುವ ಸಂಸದ ಲಾವು ಶ್ರೀಕೃಷ್ಣ ದೇವರಾಯ ಅವರು ಪಕ್ಷ ಮತ್ತು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಘೋಷಿಸಿದ್ದಾರೆ. ಇನ್ನೊಂದೆಡೆ ಸಚಿವೆ ರೋಜಾ ಅವರ ಮೇಲೆ 40 ಲಕ್ಷ ರೂಪಾಯಿ ವಂಚನೆ ಮಾಡಿದ ಆರೋಪ ಕೇಳಿಬಂದಿದೆ.
ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರಲು ಹವಣಿಸುತ್ತಿರುವ ಸಿಎಂ ಜಗನ್ಮೋಹನ್ರೆಡ್ಡಿ ರಾಜ್ಯಾದ್ಯಂತ ಸಂಚರಿಸುತ್ತಿದ್ದಾರೆ. ಇತ್ತ ಅವರದ್ದೇ ಪಕ್ಷದ ಕೆಲ ನಾಯಕರು ಬೇಸರಿಸಿಕೊಂಡು ಪಕ್ಷದಿಂದ ಹೊರಬರುತ್ತಿದ್ದಾರೆ. ಇನ್ನೂ ಕೆಲವರು ತಮಗೆ ಮುಂದಿನ ಬಾರಿ ಅವಕಾಶ ಸಿಗುವುದಿಲ್ಲ ಎಂದರಿತು ಈಗಲೇ ಮತ್ತೊಂದು ಪಕ್ಷಕ್ಕೆ ಜಂಪ್ ಆಗುತ್ತಿದ್ದಾರೆ. ಇದು ವೈಎಸ್ಆರ್ಸಿಗೆ ಹಿನ್ನಡೆ ತರುತ್ತಿದೆ.
ಸಂಸದ ಲಾವು ಶ್ರೀಕೃಷ್ಣ ರಾಜೀನಾಮೆ:ವೈಎಸ್‌ಆರ್‌ಸಿಪಿ ಸಂಸದ ಲಾವು ಶ್ರೀಕೃಷ್ಣ ದೇವರಾಯ ಅವರು ಸಂಸದ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಪಕ್ಷದಲ್ಲಿ ಕೆಲ ಕಾಲದಿಂದ ಬದಲಾದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಜೀನಾಮೆ ನೀಡಿದ್ದಾಗಿ ಅವರು ಹೇಳಿದ್ದಾರೆ. ನಾಲ್ಕೂವರೆ ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಕೈಲಾದಷ್ಟು ಕೆಲಸ ಮಾಡಿದ್ದೇನೆ. ಪಕ್ಷದಲ್ಲಿ ಸದ್ಯ ರಾಜಕೀಯ ಅನಿಶ್ಚಿತತೆ ಇದೆ. ಸಂಸದ ಸ್ಥಾನಕ್ಕೆ ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪಕ್ಷ ಚಿಂತನೆ ನಡೆಸಿದೆ. ಹೀಗಾಗಿ ನಾನು ಪಕ್ಷದಿಂದ ಹೊರಬಂದಿದ್ದೇನೆ ಎಂದು ದೇವರಾಯಲು ತಿಳಿಸಿದ್ದಾರೆ.