ಅಮರಾವತಿ(ಆಂಧ್ರ ಪ್ರದೇಶ): ಚುನಾವಣೆಗಳ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳ ಪರ, ಅಭ್ಯರ್ಥಿಗಳ ಪರ ಕಾರ್ಯಕರ್ತರು, ಬೆಂಬಲಿಗರು ಬಾಜಿ ಕಟ್ಟುವುದು ಸರ್ವೇ ಸಾಮಾನ್ಯ. ಆಂಧ್ರ ಪ್ರದೇಶದಲ್ಲಿ ಮಾಜಿ ಸಚಿವ, ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕರೊಬ್ಬರು ಇತ್ತೀಚೆಗೆ ಮುಗಿದ ಚುನಾವಣೆಯಲ್ಲೂ ಇಂತಹದ್ದೇ ಸವಾಲು ಕಟ್ಟಿ ಸೋತಿದ್ದಾರೆ. ಇದೀಗ ತಮ್ಮ ಮಾತನ್ನು ಉಳಿಸಿಕೊಳ್ಳಲು ಆ ನಾಯಕ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಈ ಕುರಿತು ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆಯನ್ನೂ ಹೊರಡಿಸಿದೆ.!
ಆಂಧ್ರ ಪ್ರದೇಶದಲ್ಲಿ ಕಳೆದ ತಿಂಗಳು ಲೋಕಸಭೆ ಚುನಾವಣೆಯೊಂದಿಗೆ ವಿಧಾನಸಭೆ ಚುನಾವಣೆಯೂ ಏಕಕಾಲಕ್ಕೆ ನಡೆದಿದೆ. ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಹೀನಾಯವಾಗಿ ಸೋಲುಂಡಿದೆ. ಕಳೆದ ಚುನಾವಣೆಯಲ್ಲಿ 175 ವಿಧಾನಸಭೆ ಕ್ಷೇತ್ರಗಳ ಪೈಕಿ 151ರಲ್ಲಿ ಗೆದ್ದು ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಆದರೆ, ಈ ಸಲ ಕೇವಲ 11 ಸ್ಥಾನಗಳನ್ನು ದಕ್ಕಿಸಲು ಜಗನ್ ಪಕ್ಷಕ್ಕೆ ಸಾಧ್ಯವಾಗಿದೆ. ಪ್ರತಿಪಕ್ಷ ಟಿಡಿಪಿ (135), ಜನಸೇನಾ (21) ಹಾಗೂ ಬಿಜೆಪಿ (8) ಮೈತ್ರಿಕೂಟ ದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ.
ವೈಎಸ್‌ಆರ್‌ಸಿಪಿ ನಾಯಕನ ಸವಾಲೇನಾಗಿತ್ತು?: ಈ ಬಾರಿಯ ಚುನಾವಣೆಯು ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಹಾಗೂ ಚಂದ್ರಬಾಬು ನಾಯ್ದು ನೇತೃತ್ವದ ಟಿಡಿಪಿ, ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ನಡುವೆ ತೀವ್ರ ಪೈಪೋಟಿಗೆ ಕಾರಣವಾಗಿತ್ತು. ಚುನಾವಣೆಗೂ ಮುನ್ನ ವೈಎಸ್‌ಆರ್‌ಸಿಪಿ ನಾಯಕ ಮುದ್ರಗಡ ಪದ್ಮನಾಭ ತಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದ್ದು, ಪಿಠಾಪುರದಲ್ಲಿ ಪವನ್ ಕಲ್ಯಾಣ್ ಸೋಲುತ್ತಾರೆ ಎಂದು ಹೇಳಿದ್ದರು. ಒಂದು ವೇಳೆ, ನಾನು ಹೇಳಿದ್ದೇನಾದರೂ ಸುಳ್ಳಾದರೆ, ನನ್ನ ಹೆಸರು ಬದಲಿಸಿಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದರು.
ಈಗ ಜೂನ್ 4ರಂದು ಪ್ರಕಟವಾದ ಚುನಾವಣೆ ಫಲಿತಾಂಶವು ಮುದ್ರಗಡ ಪದ್ಮನಾಭ ಹೇಳಿಕೆಗೆ ವ್ಯತಿರಿಕ್ತವಾಗಿ ಬಂದಿದೆ. ವೈಎಸ್‌ಆರ್ ಕಾಂಗ್ರೆಸ್ ಸೋಲು ಕಂಡಿದ್ದರೆ, ಪವನ್ ಕಲ್ಯಾಣ್ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಈ ಫಲಿತಾಂಶದ ಹೊರಬಿದ್ದ ಬೆನ್ನಲ್ಲೇ ತಮ್ಮ ಮಾತಿನ ಬದ್ಧರಾಗಿ ಪದ್ಮನಾಭ ಮುದ್ರಗಡ ತಮ್ಮ ಹೆಸರನ್ನು ಬದಲಾಯಿಸುತ್ತಿರುವುದಾಗಿ ಘೋಷಿಸಿದ್ದಾರೆ. ಇದು ಕೂಡ ಆಂಧ್ರದಲ್ಲಿ ಸಂಚಲನಕ್ಕೆ ಕಾರಣವಾಗಿದೆ.