ಕರ್ನಾಟಕ

karnataka

ETV Bharat / bharat

Yearender 2024| ರಾಮೋಜಿ ರಾವ್ ಪರಂಪರೆ: ವಿಶ್ವದ ಅತಿ ದೊಡ್ಡ ಚಿತ್ರನಗರಿಯ ಸ್ಥಾಪಕ, ದಿಗ್ಗಜ ಉದ್ಯಮಿಯ ಬದುಕಿನ ಹಿನ್ನೋಟ - THE RAMOJI RAO LEGACY

ರಾಮೋಜಿ ಗ್ರೂಪ್​ನ ಸಂಸ್ಥಾಪಕ ದಿ.ರಾಮೋಜಿ ರಾವ್ ಅವರು ಬಹುಮುಖ ವ್ಯಕ್ತಿತ್ವದವರಾಗಿದ್ದರು. ಈಟಿವಿ ಭಾರತ್‌ನ ಜಿ.ರವಿಕಿರಣ್, ರಾಮೋಜಿ ರಾವ್ ಬದುಕಿನ ಮಹೋನ್ನತ ಸಾಧನೆಯನ್ನು ಇಲ್ಲಿ ಎಳೆಎಳೆಯಾಗಿ ವಿವರಿಸಿದ್ದಾರೆ.

RAMOJI RAO SIR  RAMOJI FILM CITY  PRIYA FOODS  FREEDOM OF PRESS
ರಾಮೋಜಿ ರಾವ್ (ETV Bharat)

By ETV Bharat Karnataka Team

Published : 6 hours ago

"ಶಿಸ್ತಿನ ಹೊರತಾಗಿ ಯಶಸ್ಸಿನ ರಹಸ್ಯವಿಲ್ಲ. ಅದಿಲ್ಲದೆ, ಯಾವುದೇ ಪ್ರತಿಭೆ ಅರಳಲು ಸಾಧ್ಯವಿಲ್ಲ". ಇದು ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ಗ್ರೂಪ್ ಅಧ್ಯಕ್ಷ, ಈನಾಡು ಸಂಸ್ಥೆಯ ಸಂಸ್ಥಾಪಕರಾದ ಪದ್ಮವಿಭೂಷಣ ಪುರಸ್ಕೃತ ದಿ.ರಾಮೋಜಿ ರಾವ್​ ಅವರ ಬದುಕಿನ ಪಾಠ.

ಮಾಧ್ಯಮ ಲೋಕದಲ್ಲಿ ಕ್ರಾಂತಿ, ಸದಭಿರುಚಿಯ ಚಲನಚಿತ್ರಗಳು, ತೂಕದ ಮಾತುಗಳ ಮಾಂತ್ರಿಕ ಹಾಗೆಯೇ ಉದ್ಯಮಶೀಲತೆಯ ಜಾದುಗಾರರಾಗಿ ರಾವ್ ಚಿರಪರಿಚಿತರು. ಈ ಎಲ್ಲವೂ ಒಬ್ಬ ವ್ಯಕ್ತಿಯಲ್ಲಿ ಅಡಕವಾಗಿತ್ತೆಂದರೆ ಅದಕ್ಕೆ ನಿದರ್ಶನ ರಾಮೋಜಿ ರಾವ್​ ಮಾತ್ರ. ರಾಮೋಜಿ ರಾವ್​ ತಮ್ಮ ಶಿಖರ ಸದೃಶ ಜೀವನ ಸಾಧನೆಗಳೊಂದಿಗೆ, ಅಸಂಖ್ಯಾತ ಅಭಿಮಾನಿಗಳು ಮತ್ತು ಲಕ್ಷಾಂತರ ಅನುಯಾಯಿಗಳನ್ನು ಗಳಿಸಿದವರು. ಪತ್ರಿಕೋದ್ಯಮದಲ್ಲಿನ ನಾವೀನ್ಯತೆ ಮತ್ತು ಹೊಸ ಬಗೆಯ ಪ್ರಯೋಗಕ್ಕಾಗಿ ಜೀವನಪರ್ಯಂತ ಹೋರಾಟಗಾರನಂತೆ ಬಾಳಿದವರು ರಾವ್.

ರಾಮೋಜಿ ರಾವ್ ಎಂಬ ಮೇರು ಸಾಧಕ (ETV Bharat)

ಸದಾಕಾಲ ಜೀವಂತ ರಾಮೋಜಿ ರಾವ್ ಪರಂಪರೆ: ಆಂಧ್ರ ಪ್ರದೇಶದ ಗುಂಟೂರಿನ ಸಮೀಪದ ಪೆದಪರುಪುಡಿ ಗ್ರಾಮದಲ್ಲಿ 1936 ನವೆಂಬರ್​​ 16ರಂದು ರೈತ ಕುಟುಂಬದಲ್ಲಿ ಜನಿಸಿದ ರಾಮೋಜಿ ರಾವ್ ಸಾಧನೆ ಅಸಾಮಾನ್ಯವಾದದ್ದು. 2024 ಜೂನ್ 8ರಂದು ತಮ್ಮ 87ನೇ ವಯಸ್ಸಿನಲ್ಲಿ ರಾವ್ ಇಹಲೋಕ ತ್ಯಜಿಸಿದ್ದರು. ಆದರೆ ತಾವು ಪ್ರವೇಶಿಸಿದ ಪ್ರತಿಯೊಂದು ಕ್ಷೇತ್ರಕ್ಕೂ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ್ದು, ಶಾಶ್ವತ ಪರಂಪರೆಯನ್ನೇ ಬಿಟ್ಟು ಹೋಗಿದ್ದಾರೆ. ಹೀಗಾಗಿ, ತಮ್ಮ ಹಲವು ದಶಕಗಳ ಮೇರು ಸಾಧನೆಯಲ್ಲಿ ರಾಮೋಜಿ ರಾವ್ ಮನರಂಜನೆಯ ತೋರುದೀಪವಾಗುತ್ತಾರೆ.

ತಮ್ಮ ಕನಸಿನ ಕೂಸು, ಗಿನ್ನೆಸ್​ ವಿಶ್ವದಾಖಲೆಯಾಗಿ ಮೈದಳೆದು ನಿಂತಿರುವ ವಿಶ್ವದ ಅತಿ ದೊಡ್ಡ ಸಿನಿಮಾ ನಗರಿ ಹೈದರಾಬಾದ್‌ನ​ ಹೃದಯಭಾಗದಲ್ಲಿರುವ ರಾಮೋಜಿ ಫಿಲ್ಮ್​ ಸಿಟಿ ಕಟ್ಟಿದವರು ಇದೇ ರಾಮೋಜಿ ರಾವ್‌. ನಿಷ್ಠಾವಂತ ಚಲನಚಿತ್ರ ನಿರ್ಮಾಪಕರಾಗಿಯೂ, ಸಾಮಾಜಿಕ ಜವಾಬ್ದಾರಿಯ ಬದ್ಧತೆ ಹೊಂದಿರುವ ದಾನಿಗಳಾಗಿಯೂ, ಯಾವಾಗಲೂ ರೈತನ ಮಗನಾಗಿಯೇ ಇದ್ದ ರಾವ್​ ಅವರು ಗಗನದೆತ್ತರ ಬೆಳೆದರೂ ತಮ್ಮ ಮೂಲ ಬೇರನ್ನು ಎಂದಿಗೂ ಮರೆತಿರಲಿಲ್ಲ. ತಾವು ಹುಟ್ಟಿ ಬೆಳೆದ ಸ್ವಂತ ಗ್ರಾಮವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಿದ್ದರು.

ದಣಿವರಿಯದ ಕರ್ಮಯೋಗಿ:ರಾಮೋಜಿ ರಾವ್ ತಮ್ಮಿಡೀ ಜೀವನದುದ್ದಕ್ಕೂ ಕ್ರಿಯಾಶೀಲ ವ್ಯಕ್ತಿಯಾಗಿದ್ದರು. ಮಾಧ್ಯಮ, ಚಲನಚಿತ್ರ, ಆತಿಥ್ಯ, ಹಣಕಾಸು ಭದ್ರತೆ, ಆಹಾರ, ಕೈಗಾರಿಕೆ ಹೀಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಲಕ್ಷಾಂತರ ಜನರ ಜೀವನವನ್ನು ಸ್ಪರ್ಶಿಸಿದರು. ಅಪರೂಪದ ದೂರದೃಷ್ಟಿಯ ವ್ಯಕ್ತಿಯಾಗಿದ್ದ ರಾವ್, ಕನಸುಗಳನ್ನು ನನಸಾಗಿಸಲು ಅಹರ್ನಿಶಿ ದುಡಿಯುತ್ತಿದ್ದರು. ಮಾಧ್ಯಮ ಲೋಕದ ಸ್ಟೀರಿಯೊಟೈಪ್‌ಗಳನ್ನು ಭೇದಿಸಿ ಮುನ್ನಡೆದರು. ತಮ್ಮ ಕಾಲದ ಹಿರಿಯ ಪ್ರತಿಸ್ಪರ್ಧಿಗಳಿಗೆ ಸವಾಲು ಹಾಕಿದರು. ಮತ್ತು ಎಲ್ಲಾ ವರ್ಗದ ಓದುಗರಿಗೆ ಸೇವೆ ಸಲ್ಲಿಸುವಂತಹ ದಿಟ್ಟ ಹೆಜ್ಜೆಗಳನ್ನಿಟ್ಟರು.

ಚೆರುಕುರಿ ರಾಮೋಜಿ ರಾವ್ ಎಂಬುದು ಪೂರ್ಣ ಹೆಸರಾಗಿದ್ದು ರಾಮೋಜಿ ರಾವ್ ಎಂದೇ ಜನಪ್ರಿಯರು. ರಾವ್ ಅವರ ಬಹುಮುಖ ವ್ಯಕ್ತಿತ್ವದ ಹಿಂದೆ ಮಗು ಮನಸ್ಸಿತ್ತು. ಓರ್ವ ಸ್ನೇಹಿತನಾಗಿ, ತತ್ವಜ್ಞಾನಿಯಾಗಿ ಮತ್ತು ಮಾರ್ಗದರ್ಶಕರಾಗಿ ಆದರ್ಶಪ್ರಾಯವಾಗಿದ್ದರು. ತಮ್ಮ ಸಾವಿನ ಬಳಿಕ ಅಂತ್ಯಕ್ರಿಯೆ ಎಲ್ಲಿ ಮಾಡಬೇಕೆಂಬುದನ್ನೂ ಕೂಡಾ ಮೊದಲೇ ನಿರ್ಧರಿಸಿದ್ದರು. ರಾಮೋಜಿ ಫಿಲ್ಮ್ ಸಿಟಿಯಲ್ಲಿ ರಾವ್ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗಿತ್ತು.

ಬಹುಮುಖ ಉದ್ಯಮಿ: ಉದ್ಯಮಿಯಾಗಿದ್ದ ರಾಮೋಜಿ ರಾವ್ ಯಾವಾಗಲೂ ಹೊಸ ಆಲೋಚನೆಗಳಿಂದ ತುಂಬಿದ್ದರು. ಓದುಗರಿಗಾಗಿ, ಸಿನಿಮಾಪ್ರೇಮಿಗಳಿಗಾಗಿ, ಆಹಾರಪ್ರಿಯರಿಗಾಗಿ, ಹಣ ಉಳಿಸುವವರಿಗಾಗಿ.. ಹೀಗೆ ಎಲ್ಲಾ ವರ್ಗದ ಜನರಿಗೆ ಏನನ್ನಾದರೂ ಸೃಷ್ಟಿಸುವ ತುಡಿತ ಹೊಂದಿದ್ದರು. ನಿರಂತರ ಶ್ರಮದಿಂದ ತಮ್ಮ ಅನೇಕ ಮಾಧ್ಯಮ ಪ್ರಕಾಶನಗಳ ಮೂಲಕ ರೈತರು, ಮಹಿಳೆಯರು, ಮಕ್ಕಳು, ಯುವಕರು ಮತ್ತು ಉದ್ಯೋಗಾಕಾಂಕ್ಷಿಗಳು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳಿಗೂ ಒಂದೊಂದು ಯೋಜನೆಗಳ ಮೂಲಕ ತಲುಪಿದರು.

1962ರಲ್ಲಿ ಮಾರ್ಗದರ್ಶಿ ಚಿಟ್‌ಫಂಡ್‌, 1974ರಲ್ಲಿ ಈನಾಡು, 1980ರಲ್ಲಿ ಪ್ರಿಯಾ ಫುಡ್ಸ್, 1980ರಲ್ಲಿ ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್ಸ್, 1983ರಲ್ಲಿ ಉಷಾಕಿರಣ್ ಮೂವೀಸ್, 1995ರಲ್ಲಿ ಈಟಿವಿ ವಾಹಿನಿಗಳು, 1996ರಲ್ಲಿ ರಾಮೋಜಿ ಫಿಲ್ಮ್ ಸಿಟಿ, 2002ರಲ್ಲಿ ರಮಾದೇವಿ ಪಬ್ಲಿಕ್ ಸ್ಕೂಲ್ ಮತ್ತು 2019ರಲ್ಲಿ ಈಟಿವಿ ಭಾರತ್ ಸ್ಥಾಪಿಸಿದರು. ಇಂದಿಗೂ ಈ ಎಲ್ಲಾ ಸಂಸ್ಥೆಗಳು​ ಯಶಸ್ವಿಯಾಗಿ ನಡೆಯುತ್ತಿವೆ.

ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು: 1975ರ ಜೂನ್ 25ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಘೋಷಿಸಿದ್ದ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಈನಾಡು ಸ್ಥಾಪಿಸಿದ್ದ ರಾಮೋಜಿ ರಾವ್, ಪತ್ರಿಕಾ ಸೆನ್ಸಾರ್‌ಶಿಪ್ ವಿರುದ್ಧ ಸೆಟೆದು ನಿಂತಿದ್ದರು. ಅವರದೇ ನೇತೃತ್ವದಲ್ಲಿ ಈನಾಡು ಸಂಸ್ಥೆ ತನ್ನ 50 ವರ್ಷಗಳ ಪಯಣದಲ್ಲಿ ಜನತೆಯ ವಿವಿಧ ಹೋರಾಟಗಳಲ್ಲಿ ನಿರಂತರವಾಗಿ ಅವರ ಪರವಾಗಿ ನಿಂತಿದೆ. ದಿನಪತ್ರಿಕೆ ಸತ್ಯ ಮತ್ತು ನ್ಯಾಯವನ್ನು ಬಲವಾಗಿ ಪ್ರತಿಪಾದಿಸುತ್ತಿದೆ. ರಾಮೋಜಿ ರಾವ್ 80ರ ದಶಕದ ಉತ್ತರಾರ್ಧದಲ್ಲಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಮಾಧ್ಯಮ ಕ್ಷೇತ್ರದ ಅನ್ನದಾತ:ತಮ್ಮ ಬದುಕಿನ ಐದು ದಶಕಗಳಿಗೂ ಹೆಚ್ಚು ಕಾಲ ರಾಮೋಜಿ ರಾವ್ ಅವರು ದೊಡ್ಡ ಸಂಖ್ಯೆಯ ಪತ್ರಿಕೆಗಳು, ನಿಯತಕಾಲಿಕಗಳು ಮತ್ತು ಎಲೆಕ್ಟ್ರಾನಿಕ್ ಪ್ಲಾಟ್​​ಪಾರ್ಮ್‌ಗಳನ್ನು ಸ್ಥಾಪಿಸಿದರು. ಇವುಗಳಲ್ಲಿ ಈನಾಡು ತೆಲುಗು ದಿನಪತ್ರಿಕೆ, ಈಟಿವಿ, ಈಟಿವಿ ಭಾರತ್, ಅನ್ನದಾತ, ಬಾಲಭಾರತ, ಚತುರ ಮತ್ತು ವಿಪುಲ ಸೇರಿವೆ. 1974ರಲ್ಲಿ ಪ್ರಾರಂಭವಾದ ಈನಾಡು ದಿನಪತ್ರಿಕೆ ತೆಲುಗು ಓದುಗರ ಹೃದಯ ಗೆದ್ದಿದೆ. ಮತ್ತು ಈ ವರ್ಷ ಪತ್ರಿಕೆ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿದೆ.

ರಾಮೋಜಿ ರಾವ್ ಅನೇಕ ಗಣ್ಯ ವ್ಯಕ್ತಿಗಳು, ರಾಜಕೀಯ ನಾಯಕರು ಮತ್ತು ನಾಗರಿಕ ಸಮಾಜದ ನಾಯಕರಿಂದ ವಿಶೇಷ ಪ್ರಶಂಸೆಗಳನ್ನು ಪಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಮೋಜಿ ರಾವ್ ಪ್ರಯತ್ನಗಳನ್ನು ಶ್ಲಾಘಿಸಿದ್ದರು. "ರಾಮೋಜಿ ಗ್ರೂಪ್ ಅಧ್ಯಕ್ಷರು ಭಾರತೀಯ ಮಾಧ್ಯಮವನ್ನು ಕ್ರಾಂತಿ ಪಥದಲ್ಲಿ ಮುನ್ನಡೆಸಿದ್ದಷ್ಟೇ ಅಲ್ಲದೆ, ಈ ಮೂಲಕ ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಿದ್ದಾರೆ. ನಾನು ಅವರೊಂದಿಗೆ ಸಂವಾದ ನಡೆಸಲು ಮತ್ತು ಅವರ ಜ್ಞಾನದಿಂದ ಪ್ರಯೋಜನ ಪಡೆಯುವ ಹಲವು ಅವಕಾಶಗಳನ್ನು ಪಡೆದಿದ್ದೇನೆ" ಎಂದು ಪ್ರಧಾನಿ ಮೋದಿ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು.

ಹಿರಿಯ ಪತ್ರಕರ್ತ ಮತ್ತು ದಿ ಹಿಂದೂ ಪಬ್ಲಿಷಿಂಗ್ ಗ್ರೂಪ್ ನಿರ್ದೇಶಕ ಎನ್.ರಾಮ್, ಆಂಧ್ರ ಪ್ರದೇಶ ಸರ್ಕಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, "ರಾಮೋಜಿ ರಾವ್ ಈನಾಡನ್ನು ಸತ್ಯ ಮತ್ತು ನ್ಯಾಯಕ್ಕಾಗಿ ಬಲವಾದ ವಕೀಲರನ್ನಾಗಿ ಮಾಡಿದ್ದಾರೆ" ಎಂದು ಗುಣಗಾನ ಮಾಡಿದ್ದರು.

ರಾಮೋಜಿ ರಾವ್ ಅವರ ಪರಂಪರೆಯ ಸ್ಮರಣಾರ್ಥ ಈನಾಡು ವ್ಯವಸ್ಥಾಪಕ ನಿರ್ದೇಶಕ ಮತ್ತು ರಾಮೋಜಿ ರಾವ್ ಅವರ ಹಿರಿಯ ಪುತ್ರ ಚೆರುಕುರಿ ಕಿರಣ್ ಅವರು ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿ ನಿರ್ಮಾಣಕ್ಕೆ 10 ಕೋಟಿ ರೂ. ನೀಡಿದ್ದಾರೆ.

ಈನಾಡು ಪತ್ರಿಕೆಯ ಸುವರ್ಣ ಮಹೋತ್ಸವ: ಒಂದು ರೋಮಾಂಚಕ ಮಾಧ್ಯಮ ಸಮೂಹದ ಚುಕ್ಕಾಣಿ ಹಿಡಿದ ತಮ್ಮ ದೀರ್ಘಾವಧಿಯಲ್ಲಿ ರಾಮೋಜಿ ರಾವ್ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಅಪರಿಮಿತ ಪ್ರಯೋಗಗಳನ್ನು ಮಾಡಿದವರು. ತಮ್ಮ ನಾಯಕತ್ವದಲ್ಲಿ, ಈನಾಡು ಪತ್ರಿಕೆ ತೆಲುಗು ಪತ್ರಿಕೋದ್ಯಮದ ಕಿರೀಟವಾಗಿ ಹೊರಹೊಮ್ಮಿತು. ಭವಿಷ್ಯದ ಪೀಳಿಗೆಗೆ ಅವಕಾಶ ಕಲ್ಪಿಸಲು ಈನಾಡು ಪತ್ರಿಕೋದ್ಯಮ ಶಾಲೆಯನ್ನೂ ಆರಂಭಿಸಿದ್ದರು.

ಸರ್ಕಾರದ ಎಲ್ಲ ಒಳ್ಳೆಯ, ಕೆಟ್ಟ ಕಾರ್ಯಗಳಿಗೆ ಸರ್ಕಾರವೇ ಹೊಣೆಯಾಗಿರುತ್ತದೆ ಎನ್ನುತ್ತಿದ್ದವರು ರಾಮೋಜಿ. ಅದೇ ರೀತಿ ಈನಾಡು ಪತ್ರಿಕೆ, ರಾಮೋಜಿ ರಾವ್​ ಅವರಿಗೆ ಸಾರ್ವಜನಿಕ ಉದ್ದೇಶ ಹಾಗೂ ಜನಸಾಮಾನ್ಯರ ಒಳಿತಿಗಾಗಿ ಇದ್ದ ಬದ್ಧತೆಯ ಸಂಕೇತವೂ ಆಗಿತ್ತು.

2004ರಲ್ಲಿ ವೈ.ಎಸ್.ರಾಜಶೇಖರ್​ ರೆಡ್ಡಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಸಾರ್ವಜನಿಕರಿಗೆ ಸೇರಿದ ಸಂಪನ್ಮೂಲಗಳನ್ನು ಕೆಲವು ವ್ಯಕ್ತಿಗಳ ಒಳಿತಿಗಾಗಿ ಯಾವ ರೀತಿ ಬಳಸಲಾಗುತ್ತಿತ್ತು ಎಂಬುದರ ಕುರಿತು ವರದಿ ಮಾಡುವ ಮೂಲಕ ಈನಾಡು ಪತ್ರಿಕೆ ಸರ್ಕಾರದ ಹುಳುಕನ್ನು ಅನಾವರಣಗೊಳಿಸಿತ್ತು.

ಪತ್ರಿಕೆಯ ವಿಷಯದಲ್ಲಿ ರಾವ್, ವಿಶ್ವಾಸಾರ್ಹತೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದರು. ಈ ಮೂಲಕ 'ಈನಾಡು' ಪ್ರಾರಂಭವಾದ ನಾಲ್ಕು ವರ್ಷಗಳಲ್ಲೇ ಎಲ್ಲಾ ತೆಲುಗು ಪತ್ರಿಕೆಗಳನ್ನು ಹಿಂದಿಕ್ಕಿ ಅಗ್ರಸ್ಥಾನ ಅಲಂಕರಿಸಿತು. 1984ರ ಪ್ರಜಾಪ್ರಭುತ್ವ ಆಂದೋಲನದಂತಹ ಪ್ರತಿಯೊಂದು ಜನಾಂದೋಲನಗಳ ಹಿಂದೆ ಈನಾಡು ಇತ್ತು. ಭಾರತದ ಹಲವು ಭಾಷೆಗಳಲ್ಲಿ ಈಟಿವಿ ವಾಹಿನಿಯನ್ನು ಪ್ರಾರಂಭಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದರು. ಇದು ರಾಮೋಜಿ ರಾವ್​ ಅವರ ದೂರದೃಷ್ಟಿಗೆ ಹಿಡಿದ ಕೈಗನ್ನಡಿ. ಅದಲ್ಲದೇ, 13 ಭಾರತೀಯ ಭಾಷೆಗಳಲ್ಲಿ 23 ಸುದ್ದಿ ಪೋರ್ಟಲ್​ಗಳನ್ನು ಹೊಂದಿರುವ 'ಈಟಿವಿ ಭಾರತ್' ಎನ್ನುವ ಮೊಬೈಲ್​ ಅಪ್ಲಿಕೇಶನ್ ಸ್ಥಾಪಿಸಿ ಡಿಜಿಟಲ್​ ಫ್ಲಾಟ್​ಫಾರ್ಮ್​ಗೂ ಕಾಲಿಟ್ಟರು.​ ​

1984ರಲ್ಲಿ ಸಂಯುಕ್ತ ಆಂಧ್ರ ಪ್ರದೇಶದ NTR ಸರ್ಕಾರವನ್ನು ಪದಚ್ಯುತಗೊಳಿಸಿದಾಗ, ರಾಮೋಜಿ ರಾವ್ ನೇತೃತ್ವದ ಈನಾಡು ಪತ್ರಿಕೆ, ಅಪ್ರಜಾಸತ್ತಾತ್ಮಕ ನಡೆಯನ್ನು ದೃಢವಾಗಿ ವಿರೋಧಿಸಿತು. ಮತ್ತು ರಾಜ್ಯದಲ್ಲಿ ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಲು ಕಾರಣವಾದ ಜನರ ಚಳವಳಿಗೆ ಅಗತ್ಯ ನೈತಿಕ ಬೆಂಬಲ ನೀಡಿತು. ಹೀಗೆ ಜನರ ನಾಡಿಮಿಡಿತವನ್ನು ಗ್ರಹಿಸುವಲ್ಲಿ ಈನಾಡು ಮುಂಚೂಣಿಯಲ್ಲಿತ್ತು. 2004ರ ಯುನೈಟೆಡ್ ಎಪಿ ಚುನಾವಣೆಗೂ ಮುನ್ನ, ಈನಾಡು ವೈ.ಎಸ್.ರಾಜಶೇಖರ ರೆಡ್ಡಿ ಅವರ ರಾಜ್ಯವ್ಯಾಪಿ ಪಾದಯಾತ್ರೆಯನ್ನು ಸಮರ್ಪಕವಾಗಿ ವರದಿ ಮಾಡಿತು. ಅದೇ ರೀತಿ, ವೈಎಸ್ಆರ್ ಪುತ್ರ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು 2019ರಲ್ಲಿ ನಡೆಸಿದ ಪಾದಯಾತ್ರೆಯೂ ಈನಾಡು ಪತ್ರಿಕೆಯಲ್ಲಿ ಸಾಕಷ್ಟು ಪ್ರಚಾರ ಪಡೆಯಿತು.

ಸಂತ್ರಸ್ತರ ಬೆನ್ನೆಲುಬಾಗಿ ರಾಮೋಜಿ ಗ್ರೂಪ್​:ರಾಮೋಜಿ ಗ್ರೂಪ್ ಆಫ್ ಕಂಪನೀಸ್ ಯಾವಾಗಲೂ ನೈಸರ್ಗಿಕ ವಿಪತ್ತುಗಳಿಗೆ ತುತ್ತಾದವರಿಗೆ ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿದೆ. ಪಾಕಿಸ್ತಾನ ಗಡಿ ಗುಜರಾತ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ ನೆಲಸಮವಾದ ಕವ್ದಾ ಗ್ರಾಮವನ್ನು ಪುನರ್‌ನಿರ್ಮಿಸಿತು. ಅಲ್ಲದೆ, ಕೇರಳ ಪ್ರವಾಹದಿಂದ ಬಲಿಯಾದವರಿಗೆ ಮನೆಗಳನ್ನು ನಿರ್ಮಿಸಲಾಯಿತು. ಈನಾಡು ರಿಲೀಫ್ ಫಂಡ್ ವಿಪತ್ತುಗಳ ಸಮಯದಲ್ಲಿ ತಮ್ಮ ಜೀವನೋಪಾಯವನ್ನು ಕಳೆದುಕೊಂಡವರ ಜೀವನದಲ್ಲಿ ಭರವಸೆ ಮರುಸ್ಥಾಪಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದೆ. ತಮಿಳುನಾಡಿನ ಕಡ್ಡಲೂರ್ ಮತ್ತು ನಾಗಪಟ್ಟಿನಂನ ಸುನಾಮಿಪೀಡಿತರಿಗೆ ಸಹಾಯಹಸ್ತ ಚಾಚಲಾಯಿತು. ಯುನೈಟೆಡ್ ಎಪಿ ಮತ್ತು ಒಡಿಶಾದಲ್ಲಿ ಜನರು ಚಂಡಮಾರುತ ಮತ್ತು ಪ್ರವಾಹದಿಂದ ತತ್ತರಿಸಿದ್ದಾಗ ಪುನರ್ವಸತಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲಾಯಿತು. ರಾಮೋಜಿ ರಾವ್ ತಮ್ಮ ಜನ್ಮಸ್ಥಳವಾದ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿ ಮತ್ತು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನಾಗನಪಲ್ಲಿಯನ್ನು 28 ಕೋಟಿ ರೂಪಾಯಿ ವೆಚ್ಚದಲ್ಲಿ ಮಾದರಿ ಗ್ರಾಮಗಳನ್ನಾಗಿ ಅಭಿವೃದ್ಧಿಪಡಿಸಿದರು.

ಅಬ್ದುಲ್ಲಾಪುರ ಮೆಟ್, ಇಬ್ರಾಹಿಂಪಟ್ನಂ ಮತ್ತು ಹಯಾತ್‌ನಗರ ಮಂಡಲಗಳಲ್ಲಿ 9 ಕೋಟಿ ರೂಪಾಯಿ ವೆಚ್ಚದಲ್ಲಿ ಐದು ಸರ್ಕಾರಿ ಕಟ್ಟಡಗಳ ನಿರ್ಮಾಣ, ಮಂಚಿರಿಯಲ್, ಭದ್ರಾಚಲಂ ಮತ್ತು ಕರ್ನೂಲ್‌ನಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ವೃದ್ಧಾಶ್ರಮಗಳ ನಿರ್ಮಾಣ ಕಾರ್ಯಗಳು ರಾವ್ ಅವರ ಇತರ ಕೊಡುಗೆಗಳಾಗಿವೆ. ಕೋವಿಡ್ ಸಮಯದಲ್ಲಿ ರಾಮೋಜಿ ರಾವ್ 2 ತೆಲುಗು ರಾಜ್ಯಗಳಿಗೆ (ತೆಲಂಗಾಣ, ಆಂಧ್ರ ಪ್ರದೇಶ) 20 ಕೋಟಿ ರೂಪಾಯಿ ಮತ್ತು ತಮಿಳುನಾಡಿಗೆ 1 ಕೋಟಿ ರೂಪಾಯಿ ದಾನ ಮಾಡಿದ್ದರು.

ರಾಮೋಜಿ ಫಿಲ್ಮ್ ಸಿಟಿ(RFC)- ಒಂದು ಕನಸಿನ ಯೋಜನೆ:ರಾಮೋಜಿ ರಾವ್ ಅವರು ಚಲನಚಿತ್ರ ನಿರ್ಮಾಪಕ, ವಿತರಕ ಮತ್ತು ಸ್ಟುಡಿಯೋ ಮಾಲೀಕರಾಗಿಯೂ ಸಾಧನೆ ಮಾಡಿದವರು. ಮಯೂರಿ, ಪ್ರತಿಘಟನ, ಚಿತ್ರ ಮತ್ತು ನುವ್ವೇಕಾವಲಿ ಮುಂತಾದ ಸಂದೇಶ ಆಧರಿತ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಹಿಟ್ ಆಗಿದ್ದವು. ರಾಮೋಜಿ ಫಿಲ್ಮ್ ಸಿಟಿ (RFC) ಚಲನಚಿತ್ರ ಕ್ಷೇತ್ರಕ್ಕೆ ಕೇಂದ್ರಬಿಂದು. ಇಲ್ಲಿ ಬಾಹುಬಲಿ, ಗಜಿನಿ, ಚಂದ್ರಮುಖಿ, ರೋಬೋಟ್ ಮತ್ತು ಪುಷ್ಪ ಸೇರಿದಂತೆ 3,000ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸಲಾಗಿದೆ. RFC ವಿವಿಧ ಸಂಸ್ಥೆಗಳ ರಜಾದಿನಗಳು, ಹಬ್ಬಗಳು ಮತ್ತು ವಿಶೇಷ ಕಾರ್ಯಕ್ರಮಗಳಲ್ಲಿ ಪ್ರವಾಸಿಗರನ್ನು ಮನರಂಜಿಸಲು ವಿವಿಧ ರೀತಿಯ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮನರಂಜನೆ ಮತ್ತು ಮೋಜಿನ ಚಟುವಟಿಕೆಯ ಕೇಂದ್ರವಾಗಿಯೂ ಹೊರಹೊಮ್ಮಿದೆ.

ರಾಮೋಜಿ ರಾವ್ ಜೀವನ ಸಂದೇಶ:

  • ಯಾವಾಗಲೂ ನಾಳೆಯ ಬಗ್ಗೆ ಯೋಚಿಸಿ. ನಿನ್ನೆಯ ಬಗ್ಗೆ ಚಿಂತಿಸಬೇಡಿ.
  • ಬದಲಾವಣೆ ಮತ್ತು ಪ್ರಗತಿ ಸಹೋದರ-ಸಹೋದರಿಯರು. ಬದಲಾವಣೆಯೊಂದಿಗೆ ಮಾತ್ರ ಅಭಿವೃದ್ಧಿ ಸಾಧ್ಯ. ಅಭಿವೃದ್ಧಿ ಬಯಸಿದರೆ ಹೊಸ ಆಲೋಚನೆಗಳನ್ನು ಮಾಡಿ.
  • ಎಷ್ಟೇ ಕಷ್ಟಗಳೆದುರಾದರೂ ನಿಮ್ಮದೇ ಆದ ಬದುಕನ್ನು ಬದುಕಿ. ಯಾರ ಸಹಾಯಕ್ಕೂ ಕಾಯಬೇಡಿ.
  • ಶಿಸ್ತಿನ ಹೊರತಾಗಿ ಯಶಸ್ಸಿಗೆ ಬೇರೆ ರಹಸ್ಯವಿಲ್ಲ. ಇಲ್ಲದಿದ್ದರೆ ಯಾವ ಪ್ರತಿಭೆಯೂ ಅರಳುವುದಿಲ್ಲ.
  • ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ನಿಜವಾದ ಸಂಪತ್ತು ವಿಶ್ವಾಸಾರ್ಹತೆ. ಅದನ್ನು ನಿಮ್ಮ ಕಣ್ಣಿನಂತೆ ರಕ್ಷಿಸಿ.
  • ಪತ್ರಿಕೆ ಜನರ ಕೈಗೆ ಸಿಕ್ಕಾಗ ಮಾತ್ರ ಅದಕ್ಕೆ ಮೌಲ್ಯವಿದೆ. ಪತ್ರಿಕೆ ಜನರು ತನ್ನ ಕೈಯಲ್ಲಿದ್ದಾರೆ ಎಂದು ಭಾವಿಸಿದರೆ ಅದು ಆತ್ಮಹತ್ಯೆಗೆ ಸಮಾನ.

ಇದನ್ನೂ ಓದಿ:3 ನೂತನ ಮಾರ್ಗದರ್ಶಿ ಚಿಟ್ ಫಂಡ್ ಶಾಖೆಗಳನ್ನು ಉದ್ಘಾಟಿಸಿದ ಎಂಡಿ ಶೈಲಜಾ ಕಿರಣ್

ABOUT THE AUTHOR

...view details