ಹೈದರಾಬಾದ್: ಹವಾಮಾನ ಬದಲಾವಣೆಯ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 'ಅರ್ಥ್ ಅವರ್' ಆಚರಿಸಲಾಗುತ್ತದೆ. ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (WWF) ಪ್ರತಿ ವರ್ಷ ಈ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಎಂದಿನಂತೆ, ಈ ವರ್ಷವೂ ಮಾರ್ಚ್ 23ಕ್ಕೆ (ಇಂದು) ರಾತ್ರಿ 8:30 ರಿಂದ 9:30ರ ವರೆಗೆ ಅರ್ಥ್ ಅವರ್ ಅನ್ನು ಆಚರಿಸಲು ಎಲ್ಲಾ ರಾಷ್ಟ್ರಗಳಿಗೆ ಕರೆ ನೀಡಲಾಗಿದೆ. ಈ ಸಮಯದಲ್ಲಿ, ಮನೆ ಸೇರಿದಂತೆ ಪ್ರೇಕ್ಷಣೀಯ ಸ್ಥಳಗಳು ಮತ್ತು ಸಂಸ್ಥೆಗಳಲ್ಲಿ ಒಂದು ಗಂಟೆ ಕಾಲ ವಿದ್ಯುತ್ ಬಳಕೆ ಮಾಡದಂತೆ ತಿಳಿಸಲಾಗಿದೆ. ಅನೇಕ ಸ್ವಯಂಸೇವಾ ಸಂಸ್ಥೆಗಳು ಈಗಾಗಲೇ ರಾತ್ರಿ ಎಂಟೂವರೆಯಿಂದ ಒಂದು ಗಂಟೆ ಕಾಲ ವಿದ್ಯುತ್ ಬಳಕೆ ಮಾಡದಂತೆ ಕರೆ ನೀಡಿವೆ.
ಹವಾಮಾನ ಬದಲಾವಣೆಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. 2007ರಲ್ಲಿ, ಸಾಂಕೇತಿಕವಾಗಿ ಲೈಟ್ಸ್ ಔಟ್ ಎಂಬ ಕಾರ್ಯಕ್ರಮವು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಪ್ರಾರಂಭವಾಯಿತು. ಅಂದಿನಿಂದ, ಈ ಕಾರ್ಯಕ್ರಮವನ್ನು 190ಕ್ಕೂ ಹೆಚ್ಚು ದೇಶಗಳಲ್ಲಿ ಅನುಸರಿಸಲಾಗುತ್ತಿದೆ ಮತ್ತು ಜಾಗತಿಕ ಚಳವಳಿಯಾಗಿ ಮಾರ್ಪಟ್ಟಿದೆ. ಈ ಕ್ರಮದಲ್ಲಿ ಹೈದರಾಬಾದ್ ಕೂಡ ಇದನ್ನು ಅನುಸರಿಸುತ್ತಿದೆ. ಈ ಹಿನ್ನೆಲೆ ಇಂದು ನಗರದ ಎಲ್ಲಾ ಪ್ರವಾಸಿ ತಾಣಗಳು ಮತ್ತು ಕಟ್ಟಡಗಳು 1 ಗಂಟೆ ಕಾಲ ಕತ್ತಲಾಗಲಿವೆ.
ನಗರದ ಪ್ರಮುಖ ಪ್ರವಾಸಿ ತಾಣಗಳಾದ, ಅಂಬೇಡ್ಕರ್ ಪ್ರತಿಮೆ, ಟ್ಯಾಂಕ್ ಬಂಡ್ನ ಬುದ್ಧನ ಪ್ರತಿಮೆ, ಗೋಲ್ಕೊಂಡ ಕೋಟೆ, ದುರ್ಗಮಚೆರುವು (ಕೇಬಲ್ ಬ್ರಿಡ್ಜ್), ಚಾರ್ಮಿನಾರ್ ಸೇರಿದಂತೆ ಸರ್ಕಾರಿ ಕಚೇರಿಗಳು, ರಾಜ್ಯ ಕೇಂದ್ರ ಗ್ರಂಥಾಲಯ ಅಪಾರ್ಟ್ಮೆಂಟ್ಗಳು ಮತ್ತು ಸಮುದಾಯ ಭವನಗಳಲ್ಲಿ ಒಂದು ಗಂಟೆ ಕಾಲ ವಿದ್ಯುತ್ ಬಳಕೆಯನ್ನು ನಿಲ್ಲಿಸಲಾಗುತ್ತದೆ. ಮತ್ತೊಂದೆಡೆ, ನಗರವಾಸಿಗಳಿಗೂ ಸಹ ಈ ಅರ್ಥ್ ಅವರ್‌ನಲ್ಲಿ ಭಾಗವಹಿಸುವಂತೆ ಮತ್ತು ಸ್ವಯಂ ಪ್ರೇರಿತವಾಗಿ ಮನೆಗಳಲ್ಲಿ ವಿದ್ಯುತ್ ದೀಪಗಳು ಮತ್ತು ವಿದ್ಯುತ್ ಉಪಕರಣಗಳನ್ನು ಬಳಸದಂತೆ ಕರೆ ನೀಡಲಾಗಿದೆ.