ನವದೆಹಲಿ: ಪ್ರತಿ ವರ್ಷ ಅಕ್ಟೋಬರ್ 20 ರಂದು ವಿಶ್ವ ಆಸ್ಟಿಯೊಪೊರೋಸಿಸ್ ದಿನವನ್ನು ಆಚರಿಸಲಾಗುತ್ತದೆ. ಮೂಳೆಯ ದ್ರವ್ಯರಾಶಿ ಮತ್ತು ಸಾಂದ್ರತೆಯ ನಷ್ಟದಿಂದಾಗಿ ಮೂಳೆ ದುರ್ಬಲವಾಗಿರುತ್ತದೆ. ಇದಕ್ಕೆ ಅಸ್ಥಿರಂಧ್ರತೆ ಅಥವಾ ಆಸ್ಟಿಯೊಪೊರೋಸಿಸ್ ಎಂದು ಕರೆಯುತ್ತಾರೆ. ಈ ರೋಗದ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಗುರಿಯಾಗಿದೆ.
ಆಸ್ಟಿಯೊಪೊರೋಸಿಸ್ ದಿನ ಮೂಳೆ ಮುರಿತದ ಅಪಾಯವನ್ನು ಕಡಿಮೆ ಮಾಡಲು, ಮೂಳೆಯ ಆರೋಗ್ಯದ ಹಾಗೂ ಚಿಕಿತ್ಸೆಯ ಪ್ರಾಮುಖ್ಯತೆಯನ್ನು ಸಾರುತ್ತದೆ. ಶೈಕ್ಷಣಿಕ ಅಭಿಯಾನಗಳು, ಸಮುದಾಯ ಕಾರ್ಯಕ್ರಮಗಳು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಉಪಕ್ರಮಗಳು ಮತ್ತು ಆಸ್ಟಿಯೊಪೊರೋಸಿಸ್ ತಪಾಸಣೆಗಳು ಈ ದಿನ ನಡೆಯುತ್ತವೆ.
ಈ ದಿನದ ಇತಿಹಾಸ:ಆಸ್ಟಿಯೊಪೊರೋಸಿಸ್ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಅದರ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲು ಫೌಂಡೇಶನ್ ಫಾರ್ ಆಸ್ಟಿಯೊಪೊರೋಸಿಸ್ ರಿಸರ್ಚ್ ಅಂಡ್ ಎಜುಕೇಶನ್ (ಫೋರ್) 1996 ರಲ್ಲಿ ವಿಶ್ವ ಆಸ್ಟಿಯೊಪೊರೋಸಿಸ್ ದಿನವನ್ನು ಮೊದಲ ಆರಂಭಿಸಿತು. ಇದನ್ನು ಈಗ ಇಂಟರ್ನ್ಯಾಷನಲ್ ಆಸ್ಟಿಯೊಪೊರೋಸಿಸ್ ಫೌಂಡೇಶನ್ (ಐಒಎಫ್) ಕರೆಯಲಾಗುತ್ತದೆ.
ಈ ದಿನ ಮೂಳೆಯ ಆರೋಗ್ಯ, ಆಸ್ಟಿಯೊಪೊರೋಸಿಸ್ ತಡೆಗಟ್ಟುವ ಬಗ್ಗೆ ಮತ್ತು ಚಿಕಿತ್ಸೆಯ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಿಗೆ, ವೈದ್ಯರು ಮತ್ತು ನೀತಿ ನಿರೂಪಕರಿಗೆ ಶಿಕ್ಷಣ ನೀಡುವ ಹಲವು ಚಟುವಟಿಕೆಗಳನ್ನು ಒಳಗೊಂಡಿದೆ. ಇಂದು ಆಸ್ಟಿಯೊಪೊರೋಸಿಸ್ ಅಪಾಯದ ಅಂಶಗಳು, ಮೂಳೆ ಸಾಂದ್ರತೆಯ ಪರೀಕ್ಷೆಯ ಪ್ರಾಮುಖ್ಯತೆ ಮತ್ತು ಆರೋಗ್ಯಕರ ಜೀವನಶೈಲಿ ಆಯ್ಕೆಗಳಂತಹ ವಿಷಯಗಳ ಬಗ್ಗೆ ಗಮನ ಹರಿಸಲು ಪ್ರೋತ್ಸಾಹಿಸಲಾಗುತ್ತದೆ.
ವಿಶ್ವ ಆಸ್ಟಿಯೊಪೊರೋಸಿಸ್ ದಿನದ ಮಹತ್ವ:ಈ ದಿನವು ಆಸ್ಟಿಯೊಪೊರೋಸಿಸ್ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುವ ಮೂಲಕ ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಮೂಳೆ ಆರೋಗ್ಯದ ಕುರಿತು ಗಮನ ಹರಿಸುವಂತೆ ಮಾಡುತ್ತದೆ. ಆಸ್ಟಿಯೊಪೊರೋಸಿಸ್ ಬಗ್ಗೆ ಶಿಕ್ಷಣ ನೀಡಲು ಈ ದಿನ ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಉತ್ತಮ ಆರೋಗ್ಯ ರಕ್ಷಣೆ ನೀತಿಗಳು, ಸಂಶೋಧನೆಗೆ ಧನಸಹಾಯ ಮತ್ತು ಆಸ್ಟಿಯೊಪೊರೋಸಿಸ್ ತಪಾಸಣೆ ಮತ್ತು ಚಿಕಿತ್ಸೆಯನ್ನು ಪ್ರೋತ್ಸಾಹಿಸುತ್ತದೆ.
ಆಸ್ಟಿಯೊಪೊರೋಸಿಸ್ ಮತ್ತು ಸಂಬಂಧಿತ ಕಾಯಿಲೆಗಳಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ಸಂಸ್ಥೆಗಳು, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದವರು ಮತ್ತು ಸರ್ಕಾರಗಳ ನಡುವೆ ಅಂತಾರಾಷ್ಟ್ರೀಯ ಮಟ್ಟದ ಸಹಯೋಗವನ್ನು ಈ ದಿನವು ಉತ್ತೇಜಿಸುತ್ತದೆ. ಇದು ಮೂಳೆ ಆರೋಗ್ಯದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ, ವ್ಯಾಯಾಮ, ಸರಿಯಾದ ಪೋಷಣೆ ಮತ್ತು ನಿಯಮಿತ ತಪಾಸಣೆಯಂತಹ ಅಭ್ಯಾಸಗಳ ಪ್ರಮುಖ್ಯತೆಯನ್ನು ಸಾರುತ್ತದೆ.