IND VS PAK Emerging Asia Cup 2024: ಟಿ20 ಎಮರ್ಜಿಂಗ್ ಏಷ್ಯಾಕಪ್ 2024ರಲ್ಲಿ ಭಾರತ ಎ ತಂಡ ಗೆಲುವಿನೊಂದಿಗೆ ಶುಭಾರಂಭ ಮಾಡಿತು. ಮಸ್ಕತ್ ಅಲ್ ಅಮರತ್ ಕ್ರಿಕೆಟ್ ಮೈದಾನದಲ್ಲಿ (ಒಮನ್) ಶನಿವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ 7 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸುವ ಮೂಲಕ ಟೀಂ ಇಂಡಿಯಾ ತನ್ನ ಶಕ್ತಿ ಪ್ರದರ್ಶಿಸಿತು.
ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅದರಂತೆ, 20 ಓವರ್‌ಗಳಲ್ಲಿ 183 ರನ್‌ಗಳನ್ನು ಕಲೆಹಾಕಿತು. ನಾಯಕ ತಿಲಕ್ ವರ್ಮಾ ಗರಿಷ್ಠ 43 ರನ್ ಗಳಿಸಿದರೆ, ಅಭಿಷೇಕ್ ಶರ್ಮಾ 35, ಪ್ರಭಾಸಿಮ್ರಾನ್ ಸಿಂಗ್ 36 ಮತ್ತು ನೆಹಾಲ್ ವಧೇರಾ 35 ರನ್‌ಗಳ ಕೊಡುಗೆ ನೀಡಿದರು. ಭಾರತ ನೀಡಿದ 184 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಲಷ್ಟೇ ಶಕ್ತವಾಯಿತು.
ಕೊನೆಯ ಓವರ್‌ನಲ್ಲಿ ಪಾಕಿಸ್ತಾನದ ಗೆಲುವಿಗೆ 17 ರನ್‌ಗಳ ಅಗತ್ಯವಿತ್ತು. ಈ ಹಂತದ ಮೊದಲ ಎಸೆತದಲ್ಲಿ ಅಬ್ದುಲ್ ಸಮದ್ ಔಟಾದರು. ಎರಡನೇ ಎಸೆತದಲ್ಲಿ ಸಿಂಗಲ್ ಮತ್ತು ಮೂರನೇ ಎಸೆತದಲ್ಲಿ ಬೌಂಡರಿ ಕಲೆಹಾಕಿತು. ಕೊನೆಯ 3 ಎಸೆತಗಳಲ್ಲಿ 12 ರನ್ ಬೇಕಿದ್ದಾಗ ಪಾಕ್ ಆಟಗಾರರು ನಾಲ್ಕು ಮತ್ತು ಐದನೇ ಬಾಲ್ ಡಾಟ್ ಮಾಡಿದರು. ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿತು. ಇದರೊಂದಿಗೆ ಪಾಕ್ 7 ರನ್‌ಗಳಿಂದ ಸೋಲನುಭವಿಸಿತು.
India ‘A’ clinched victory against Pakistan ‘A’ by 7 runs in a nail-biting match! A thrilling finish that kept everyone on the edge till the last ball! 🙌🥶#MensT20EmergingTeamsAsiaCup #ACC pic.twitter.com/OgCzabLrzs
— AsianCricketCouncil (@ACCMedia1) October 19, 2024
ಭಾರತದ ಪರ ಅಂಶುಲ್ ಕಾಂಬೋಜ್ 4 ಓವರ್‌ಗಳಲ್ಲಿ 33 ರನ್ ನೀಡಿ 3 ವಿಕೆಟ್ ಪಡೆದರು. ರಸಿಖ್ ಸಲಾಂ, ನಿಶಾಂತ್ ಸಿಂಧು ತಲಾ 2 ವಿಕೆಟ್ ಉರುಳಿಸಿದರು.
ಫೈನಲ್ ಪಂದ್ಯ: ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಸ್ಪರ್ಧಿಸಿವೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ, ಹಾಂಕ್ ಕಾಂಗ್ ಮತ್ತು ಶ್ರೀಲಂಕಾ ಗುಂಪು-ಎನಲ್ಲಿವೆ. ಬಿ ಗುಂಪಿನಲ್ಲಿ ಭಾರತ, ಒಮನ್, ಪಾಕಿಸ್ತಾನ ಮತ್ತು ಯುಎಇ ತಂಡಗಳಿವೆ. ಗುಂಪಿನಲ್ಲಿ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಅಕ್ಟೋಬರ್ 25ರಂದು ಸೆಮಿಸ್ ಮತ್ತು ಅಕ್ಟೋಬರ್ 27ರಂದು ಫೈನಲ್ ನಡೆಯಲಿದೆ.