ರೇವಾ(ಮಧ್ಯ ಪ್ರದೇಶ):ರಸ್ತೆ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡ ಮಹಿಳೆಯೊಬ್ಬರು ಆಸ್ಪತ್ರೆಯ ವೈದ್ಯರಲ್ಲಿ ಆತನ ವೀರ್ಯಕ್ಕೆ ಬೇಡಿಕೆಯಿಟ್ಟ ವಿಚಿತ್ರ ಘಟನೆ ಮಧ್ಯ ಪ್ರದೇಶದ ರೇವಾ ಜಿಲ್ಲೆಯಲ್ಲಿ ಈಚೆಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಹಿಳೆಯ ಕೋರಿಕೆ ಕೇಳಿ ವೈದ್ಯರೇ ಕೆಲಕಾಲ ದಂಗಾಗಿದ್ದಾರೆ.
ಸಿಧಿ ಜಿಲ್ಲೆಯ ಚುರ್ಹತ್ ವಿಧಾನಸಭಾ ಕ್ಷೇತ್ರದ ನಿವಾಸಿಯಾಗಿದ್ದ ವ್ಯಕ್ತಿಯೊಬ್ಬ, ರೇವಾದಲ್ಲಿ ನಡೆದ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆತನ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದ್ದರಿಂದ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದವು. ಆತನನ್ನು ಆಸ್ಪತ್ರೆಗೆ ತರುವಷ್ಟರಲ್ಲಿ ಸಾವನ್ನಪ್ಪಿದ್ದ.
ಅಪಘಾತದ ಸುದ್ದಿ ತಿಳಿದು ಮೃತನ ಕುಟುಂಬಸ್ಥರು ಆಸ್ಪತ್ರೆಗೆ ಆಗಮಿಸಿದ್ದಾರೆ. ಇದೇ ವೇಳೆ ವೈದ್ಯರು ಮರಣೋತ್ತರ ಪರೀಕ್ಷೆ ಸಜ್ಜಾಗಿದ್ದಾರೆ. ಆದರೆ, ಇದಕ್ಕೆ ಅನುಮತಿ ನೀಡಲು ಕುಟುಂಬಸ್ಥರು ನಿರಾಕರಿಸಿದ್ದಾರೆ. ಜೊತೆಗೆ, ಮೃತನ ಪತ್ನಿ ಆಸ್ಪತ್ರೆಯ ಸಿಬ್ಬಂದಿಗೆ ವಿಚಿತ್ರವಾದ ಬೇಡಿಕೆ ಇಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸುವುದಕ್ಕೂ ಮೊದಲು ತನ್ನ ಪತಿಯಿಂದ ವೀರ್ಯವನ್ನು ಹೊರತೆಗೆಯಲು ಮನವಿ ಮಾಡಿದ್ದಾರೆ.
ಅಚ್ಚರಿಗೀಡಾದ ವೈದ್ಯರು:ಮೃತ ವ್ಯಕ್ತಿಯ ದೇಹದಿಂದ ವೀರ್ಯವನ್ನು ತೆಗೆಯಲು ಆಕೆ ಮನವಿ ಮಾಡಿದಾಗ, ಇದನ್ನು ಕೇಳಿದ ವೈದ್ಯರು ಕೆಲಕಾಲ ಅಚ್ಚರಿಗೆ ಒಳಗಾಗಿದ್ದಾರೆ. ಇದು ಸಂಕೀರ್ಣ ಪ್ರಕ್ರಿಯೆ ಮತ್ತು ಇಂತಹ ಯಾವುದೇ ನಿಯಮಗಳು ಆಸ್ಪತ್ರೆಯಲ್ಲಿಲ್ಲ ಎಂದು ಮಹಿಳೆಗೆ ತಿಳಿಹೇಳಿದ್ದಾರೆ. ಆದರೆ, ಮಹಿಳೆ ಮಾತ್ರ ತನ್ನ ಬೇಡಿಕೆಗೆ ಕಟಿಬದ್ಧಳಾಗಿದ್ದಾಳೆ. ಇದರಿಂದ ವೈದ್ಯರು ಪೇಚಿಗೆ ಬಿದ್ದಿದ್ದಾರೆ.