ಕರ್ನಾಟಕ

karnataka

ETV Bharat / bharat

6 ವರ್ಷಗಳ ಬಳಿಕ ಜಮ್ಮು & ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹಿಂಪಡೆತ: ಹೊಸ ಸರ್ಕಾರಕ್ಕೆ ವೇದಿಕೆ ಸಜ್ಜು

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ನ್ಯಾಷನಲ್​ ಕಾನ್ಫರೆನ್ಸ್​​ ಮೈತ್ರಿಕೂಟ ಗೆದ್ದಿದ್ದು, ಸರ್ಕಾರದ ರಚನೆಗೆ ತಯಾರಾಗಿದೆ. ಈ ಹಿನ್ನೆಲೆ 2018 ರಿಂದ ಆಡಳಿತ ನಡೆಸುತ್ತಿದ್ದ ರಾಷ್ಟ್ರಪತಿ ಆಡಳಿತವನ್ನು ಹಿಂಪಡೆಯಲಾಗಿದೆ.

By PTI

Published : 5 hours ago

ಜಮ್ಮು & ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹಿಂಪಡೆಯಲಾಗಿದೆ.
ಜಮ್ಮು & ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹಿಂಪಡೆಯಲಾಗಿದೆ. (IANS)

ನವದೆಹಲಿ:ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ 6 ವರ್ಷಗಳ ಬಳಿಕ ರಾಷ್ಟ್ರಪತಿ ಆಡಳಿತವನ್ನು ಹಿಂಪಡೆಯಲಾಗಿದೆ. ಕಣಿವೆಯಲ್ಲಿ 10 ವರ್ಷಗಳ ಬಳಿಕ ವಿಧಾನಸಭೆ ಚುನಾವಣೆ ನಡೆದು 49 ಸ್ಥಾನಗಳನ್ನು ಪಡೆಯುವ ಮೂಲಕ ನ್ಯಾಷನಲ್​ ಕಾನ್ಫರೆನ್ಸ್​​ ಮೈತ್ರಿಕೂಟ ಜಯಭೇರಿ ಭಾರಿಸಿದೆ.

ಸದ್ಯ ಸರ್ಕಾರದ ರಚನೆಗೆ ಸಿದ್ಧತೆಗಳು ನಡೆಯುತ್ತಿದ್ದು, ನೂತನ ಸಿಎಂ ಹಾಗೂ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಅಕ್ಟೋಬರ್​​ 16(ಬುಧವಾರ)ದಂದು ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಭಾನುವಾರ ಹಿಂಪಡೆಯಲಾಗಿದೆ. ಈ ಮೂಲಕ ಕೇಂದ್ರಾಡಳಿತ ಪ್ರದೇಶದಲ್ಲಿ ಹೊಸ ಸರ್ಕಾರ ರಚನೆಗೆ ಹಾದಿ ಸುಗಮವಾಗಿದೆ.

ಕೇಂದ್ರ ಗೃಹ ಸಚಿವಾಲಯದಿಂದ ಗೆಜೆಟ್ ಅಧಿಸೂಚನೆ:ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆಯ ಸೆಕ್ಷನ್ 73 ರ ಮೂಲಕ ನೀಡಲಾದ ಅಧಿಕಾರಗಳ ಅನುಷ್ಠಾನದಲ್ಲಿ 2019 (2019 ರ 34) ಅನ್ನು ಭಾರತದ ಸಂವಿಧಾನದ 239 ಮತ್ತು 239A ವಿಧಿಗಳೊಂದಿಗೆ ಓದಲಾಗಿದೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 31, 2019ರ ದಿನಾಂಕದ ಆದೇಶವನ್ನು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ, 2019ರ ಸೆಕ್ಷನ್ 54ರ ಅಡಿ ಮುಖ್ಯಮಂತ್ರಿಯ ನೇಮಕದ ಮೊದಲು ಹಿಂತೆಗೆದುಕೊಳ್ಳಲಾಗುತ್ತದೆ"ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹಿ ಹಾಕಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇನ್ನು, ಚುನಾವಣೆಯಲ್ಲಿ ಗೆಲುವು ಕಂಡಿರುವ ಎನ್‌ಸಿ ಉಪಾಧ್ಯಕ್ಷ ಒಮರ್​ ಅಬ್ದುಲ್ಲಾ ಜಮ್ಮು ಮತ್ತು ಕಾಶ್ಮೀರದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಇವರು ಮೈತ್ರಿಕೂಟದ ನಾಯಕರಾಗಿ ಆಯ್ಕೆಯಾಗಿದ್ದು 2 ನೇ ಬಾರಿಗೆ ಸಿಎಂ ಸ್ಥಾನವನ್ನು ಅಲಂಕರಿಸಲಿದ್ದಾರೆ.

ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿತ್ತು. ನಂತರ ಅಕ್ಟೋಬರ್ 31, 2019 ರಂದು ಜಮ್ಮು ಮತ್ತು ಕಾಶ್ಮೀರದ ಮೇಲೆ ಕೇಂದ್ರದ ಆಡಳಿತವನ್ನು ಹೇರಲಾಯಿತು. ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ, 2019 ಅನ್ನು ಆಗಸ್ಟ್ 5, 2019 ರಂದು ಸಂಸತ್ತು ಅಂಗೀಕರಿಸಿತು. ಹಿಂದೆ ಇದ್ದ ವಿಶೇಷ ಸ್ಥಾನಮಾನ ಸಂವಿಧಾನದ 370 ನೇ ವಿಧಿಯನ್ನು ಕೂಡ ಆ ದಿನ ರದ್ದುಗೊಳಿಸಲಾಗಿತ್ತು.

2014ರಲ್ಲಿ ವಿಧಾನಸಭೆ ನಡೆದು ಬಿಜೆಪಿ ಮತ್ತು ಪಿಡಿಪಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದವು. 2018ರಲ್ಲಿ ಬಿಜೆಪಿ ಬೆಂಬಲವನ್ನು ಹಿಂತೆದೆಗೆದುಕೊಳ್ಳುತ್ತದೆ. ಇದರಿಂದ ಸರ್ಕಾರ ಪತನ ಗೊಳ್ಳುತ್ತದೆ. ಆಗಿನ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ರಾಜೀನಾಮೆ ನೀಡುತ್ತಾರೆ. ಇದಾದ ಬಳಿಕ ರಾಷ್ಟ್ರಪತಿ ಆಡಳಿತ ಜಾರಿಯಾಗಿತ್ತು.

ಕೇಂದ್ರದ ಆಡಳಿತವನ್ನು ಮೊದಲು ರಾಜ್ಯದಲ್ಲಿ ಆರು ತಿಂಗಳ ಕಾಲ ರಾಜ್ಯಪಾಲರ ಆಳ್ವಿಕೆಯಾಗಿ ಹೇರಲಾಯಿತು. ನಂತರ, ಮುಂದಿನ ಆರು ತಿಂಗಳ ಕಾಲ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಯಿತು. ಅಂದಿನಿಂದ ಇಂದಿನವರೆಗೆ ರಾಷ್ಟ್ರಪತಿ ಆಡಳಿತ ನಡೆಯುತ್ತಿದ್ದು, ಈಗ ಆ ಅಧಿಕಾರವನ್ನು ಹಿಂಪಡೆಯಲಾಗಿದೆ.

ಇದನ್ನೂ ಓದಿ:ಜಮ್ಮು- ಕಾಶ್ಮೀರದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಎನ್‌ಸಿ- ಕಾಂಗ್ರೆಸ್​ ಮೈತ್ರಿ; ಬುಧವಾರ ಪ್ರಮಾಣ ಸ್ವೀಕಾರ?

ABOUT THE AUTHOR

...view details