ನವದೆಹಲಿ: ಸೈಬರ್ ದಾಳಿಯಂತಹ ಅಪರಾಧಗಳ ಪತ್ತೆಗಾಗಿಯೇ 5 ಸಾವಿರ ಸೈಬರ್ ಕಮಾಂಡೋಗಳಿಗೆ ಮುಂದಿನ ಐದು ವರ್ಷದಲ್ಲಿ ತರಬೇತಿ ನೀಡಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಸೈಬರ್ ವಂಚನೆ ತಗ್ಗಿಸುವಿಕೆ ಕೇಂದ್ರ ಮತ್ತು ಸೈಬರ್ ಅಪರಾಧ ಮಾಹಿತಿ ಹಂಚಿಕೆಗೆ ಪೋರ್ಟಲ್ ಸೇರಿದಂತೆ ಹಲವು ಉಪಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೆಹಲಿಯಲ್ಲಿನ ಇಂಡಿಯನ್ ಸೈಬರ್ ಕ್ರೈಮ್ ಕೋರ್ಡಿನೇಷನ್ ಸೆಂಟರ್ (14ಸಿ) ಮೊದಲ ಸಂಸ್ಥಾಪನ ದಿನಾಚರಣೆಯಲ್ಲಿ ಭಾಗಿಯಾದ ಅವರು, ರಾಷ್ಟ್ರದ ಭದ್ರತೆ ಮತ್ತು ಪ್ರಗತಿಯಲ್ಲಿ ಸೈಬರ್ ಭದ್ರತೆ ನಿರ್ಣಾಯಕವಾಗಿದೆ. ಈ ನಿಟ್ಟಿನಲ್ಲಿ ಭಾರತದೆಲ್ಲೆಡೆ ಸೈಬರ್ ರಕ್ಷಣೆ ಬಲಗೊಳಿಸಲು 5 ಸಾವಿರ ಸೈಬರ್ ಕಮಾಂಡೋಗಳಿಗೆ ತರಬೇತಿ ನೀಡಲಾಗುವುದು. ಸದ್ಯ ಸೈಬರ್ ಸೆಕ್ಯೂರಿಟಿ ಇಲ್ಲದೇ ದೇಶದ ಅಭಿವೃದ್ಧಿ ಸಾಧ್ಯ ಇಲ್ಲ ಎಂದರು.
ರಾಜ್ಯ ಮಟ್ಟದಲ್ಲಿ ಸೈಬರ್ ಸಸ್ಪೆಕ್ಟ್ ರಿಜಿಸ್ಟ್ರಿ ರಚಿಸುವ ಪ್ರಾಮುಖ್ಯತೆ ತಿಳಿಸಿದ ಅವರು, ಇದು ಸೈಬರ್ ಅಪರಾಧದ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಡೇಟಾಬೇಸ್ ಆಗಿ ಕಾರ್ಯನಿರ್ವಹಿಸುತ್ತದೆ. ಸೈಬರ್ ವಂಚನೆ ತಗ್ಗಿಸುವಿಕೆ ಕೇಂದ್ರವು ಪೊಲೀಸ್, ಹಣಕಾಸು ಸಂಸ್ಥೆಗಳು ಮತ್ತು ಇತರ ಸಂಬಂಧಿತ ಏಜೆನ್ಸಿಗಳನ್ನು ಒಂದೇ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಲಿದೆ. ಆದರೆ, ಸಮನ್ವಯ ವೇದಿಕೆಯು ಸೈಬರ್ ಬೆದರಿಕೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲಿದೆ.