ಪ್ರಯಾಗ್‌ರಾಜ್, ಉತ್ತರಪ್ರದೇಶ: ಪತ್ನಿ ಮುಸುಕು(ಪರ್ದಾ) ಧರಿಸಿಲ್ಲ ಎಂಬುದನ್ನು ಮುಂದಿಟ್ಟುಕೊಂಡು ವಿಚ್ಛೇದನ ಅಂಗೀಕರಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಪರ್ದಾ ಧರಿಸದೇ ಪತ್ನಿ ತಮಗೆ ಮಾನಸಿಕ ಹಿಂಸೆ ನೀಡಿದ್ದಾರೆ. ಇದು ಕ್ರೌರ್ಯಕ್ಕೆ ಸಮಾನವಾಗಿದೆ. ಈ ಆಧಾರದ ಮೇಲೆಯೇ ವಿಚ್ಛೇದನ ಪಡೆಯುವ ಹಕ್ಕನ್ನು ನೀಡಬಹುದಾಗಿದೆ ಎಂಬ ಪತಿಯ ವಾದವನ್ನು ಒಪ್ಪಿಕೊಳ್ಳಲು ಅಲಹಾಬಾದ್ ಉಚ್ಛ ನ್ಯಾಯಾಲಯ ನಿರಾಕರಿಸಿದೆ. ಆದರೆ, ಮದುವೆ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಅಂಗೀಕರಿಸಿದೆ.
ಕ್ರೌರ್ಯದ ವಿಷಯದ ಬಗ್ಗೆ ಪತಿಯ ಹೇಳಿಕೆ ಸ್ವೀಕರಿಸಲು ನ್ಯಾಯಾಲಯ ನಿರಾಕರಿಸಿತು. ಹೆಂಡತಿ ಏನನ್ನು ಧರಿಸಬೇಕು, ಏನನ್ನು ಧರಿಸಬಾರದು ಎಂಬ ಮುಕ್ತ ಇಚ್ಛೆ ಹೊಂದಿದ್ದಾಳೆ. ಅವರು ಮಾರುಕಟ್ಟೆ ಮತ್ತು ಇತರ ಸ್ಥಳಗಳಿಗೆ ಘೂಂಘಾಟ್ (ಮುಸುಕು) ಧರಿಸದೇ ಹೋಗುತ್ತಾರೆ. ಇದು ತಮಗೆ ಮಾನಸಿಕ ಕಿರಿಯನ್ನುಂಟು ಮಾಡುತ್ತದೆ. ಹೀಗಾಗಿ ತಮಗೆ ವಿಚ್ಛೇದನ ಬೇಕು ಎಂಬ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಸೌಮಿತ್ರ ದಯಾಳ್ ಸಿಂಗ್ ಮತ್ತು ನ್ಯಾಯಮೂರ್ತಿ ಡೊನಾಡಿ ರಮೇಶ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
ಯಾವುದೇ ಅಕ್ರಮ ಅಥವಾ ಅನೈತಿಕ ಸಂಬಂಧ ಹೊಂದದೇ, ಪತ್ನಿ ಸ್ವತಂತ್ರವಾಗಿ ಇರುವ ಅಥವಾ ಏಕಾಂಗಿಯಾಗಿ ಪ್ರಯಾಣಿಸುವ ಇಲ್ಲವೇ ನಾಗರಿಕ ಸಮಾಜದ ಇತರ ಸದಸ್ಯರನ್ನು ಭೇಟಿಯಾಗುವುದನ್ನು ಕ್ರೌರ್ಯ ಎಂದು ಕರೆಯಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಹೆಂಡತಿ ಪರ್ದಾ (ಮುಸುಕು)ಪದ್ಧತಿಯನ್ನು ಆಚಸದೇ ಇರುವುದು ಮಾನಸಿಕ ಕ್ರೌರ್ಯ ಆಗುತ್ತದೆ. ಈ ಆಧಾರದ ಮೇಲೆ ತಮಗೆ ವಿಚ್ಛೇದನ ಪಡೆಯುವ ಹಕ್ಕಿದೆ ಎಂಬ ಪತಿಯ ವಾದವನ್ನು ಹೈಕೋರ್ಟ್ ವಿಭಾಗೀಯ ಪೀಠ ಈ ಮೂಲಕ ತಳ್ಳಿ ಹಾಕಿದೆ.