ಲಖನೌ(ಉತ್ತರ ಪ್ರದೇಶ):ಮಲಮಗ ಮತ್ತು ಆತನ ಆಪ್ತರು ಸೇರಿಕೊಂಡು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಪತ್ನಿ ಆರೋಪಿಸಿದ್ದಾರೆ. ಈ ಸಂಬಂಧ ಉತ್ತರ ಪ್ರದೇಶದ ಗಾಜಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
40 ವರ್ಷದ ಮಹಿಳೆ, ''ನಾನು ಅನಾಥೆ. ಜಮ್ಮು ಮತ್ತು ಕಾಶ್ಮೀರ ಕೇಡರ್‌ನ ನಿವೃತ್ತ ಐಎಎಸ್ ಅಧಿಕಾರಿಯನ್ನು 2020ರಲ್ಲಿ ವಿವಾಹವಾಗಿದ್ದೆ. ನನ್ನ ಪತಿಯ ಮೊದಲ ಪತ್ನಿ, ಆಕೆಯ ಮಗ ಮತ್ತು ಮಗಳು ಹಾಗೂ ಇತರೆ ಸದಸ್ಯರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು'' ಎಂದು ದೂರು ನೀಡಿದ್ದಾರೆ.
''ನನ್ನನ್ನು ಜಮ್ಮು ಮತ್ತು ಕಾಶ್ಮೀರದ ಮನೆಯಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ವರ್ಷಗಳು ಕಳೆದಂತೆ ಕಿರುಕುಳ ಹೆಚ್ಚಾಯಿತು. ಏಪ್ರಿಲ್ 11-14ರಿಂದ ನನ್ನನ್ನು ಕೋಣೆಯಲ್ಲಿ ಬಂಧಿಸಲಾಗಿತ್ತು. ಊಟವನ್ನೂ ನೀಡಿರಲಿಲ್ಲ. ನನ್ನ ಗಂಡನ ಮೊದಲ ಪತ್ನಿಯ ಮಗ ನನ್ನ ಮೊಬೈಲ್ ಫೋನ್ ಕಸಿದುಕೊಂಡಿದ್ದ. ನಂತರ ಆತ ಮತ್ತು ಆತನ ಸಹಾಯಕರು ನನ್ನ ಮೇಲೆ ಅತ್ಯಾಚಾರ ಎಸಗಿದ್ದರು. ಸಾಕಷ್ಟು ಬೇಡಿಕೊಂಡ ಬಳಿಕ ನನ್ನನ್ನು ಬಿಡಲು ಒಪ್ಪಿಕೊಂಡರು'' ಎಂದು ದೂರಿನಲ್ಲಿ ನೋವು ತೋಡಿಕೊಂಡಿದ್ದಾರೆ.