ಜಮ್ಮು:ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಇಂದು (ಬುಧವಾರ) ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದ ಸಿಎಂ ಆಗಿ ಒಮರ್ ಅಬ್ದುಲ್ಲಾ ಪ್ರಮಾಣವಚನ ಸ್ವೀಕರಿಸಿದರು. ಅವರ ಸಂಪುಟದಲ್ಲಿ ಓರ್ವ ಡಿಸಿಎಂ, ನಾಲ್ವರು ಸಚಿವರು ಸೇರಿಕೊಂಡಿದ್ದಾರೆ.
ಒಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರದಲ್ಲಿ ಸುರೀಂದರ್ ಕುಮಾರ್ ಚೌಧರಿ ಅವರನ್ನು ಉಪ ಮುಖ್ಯಮಂತ್ರಿ ಮಾಡಲಾಗಿದೆ. ಸುರಿಂದರ್ ಚೌಧರಿ ಅವರು ಹಿಂದು ಸಮುದಾಯದ ಪ್ರಬಲ ನಾಯಕ. ವಿಶೇಷವೆಂದರೆ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಏಕೈಕ ಹಿಂದು ಶಾಸಕ. ಕಾಂಗ್ರೆಸ್ ಮತ್ತು ಎನ್‌ಸಿ ಮೈತ್ರಿಯ ಏಕೈಕ ಹಿಂದು ಶಾಸಕರೂ ಹೌದು.
ಬಿಜೆಪಿ ಮುಖ್ಯಸ್ಥನ ಸೋಲಿಸಿದ್ದಕ್ಕೆ ಡಿಸಿಎಂ ಪಟ್ಟ:ಎನ್‌ಸಿ-ಕಾಂಗ್ರೆಸ್ ಮೈತ್ರಿಕೂಟದ ಏಕೈಕ ಹಿಂದೂ ಶಾಸಕರಾಗಿರುವ ಸುರೀಂದರ್ ಚೌಧರಿ ಅವರು ಬಿಜೆಪಿ ಅಧ್ಯಕ್ಷರಾಗಿರುವ ರವೀಂದರ್ ರೈನಾ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದರು. ಈ ಸಾಧನೆಯೇ ಅವರನ್ನು ಉಪಮುಖ್ಯಮಂತ್ರಿ ಪಟ್ಟಕ್ಕೆ ತಂದು ಕೂರಿಸಿದೆ.
ನೌಶೇರಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಸುರೀಂದರ್ ಕುಮಾರ್ ಚೌಧರಿ ಅವರು ಈಚೆಗೆ ಮುಗಿದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಮ್ಮು ಕಾಶ್ಮೀರ ಘಟಕದ ಅಧ್ಯಕ್ಷ ರವೀಂದರ್ ರೈನಾ ಅವರನ್ನು 7,819 ಮತಗಳ ಅಂತರದಿಂದ ಸೋಲಿಸಿದ್ದರು. 2014ರ ವಿಧಾನಸಭಾ ಚುನಾವಣೆಯಲ್ಲಿ ಸುರೀಂದರ್ ಚೌಧರಿ ಪಿಡಿಪಿಯಿಂದ ಸ್ಪರ್ಧಿಸಿದಾಗ ಇದೇ ರವೀಂದರ್ ರೈನಾ ಅವರ ವಿರುದ್ಧ 9,000ಕ್ಕೂ ಹೆಚ್ಚು ಮತಗಳಿಂದ ಸೋಲು ಕಂಡಿದ್ದರು.