ವಯನಾಡ್/ಹೈದರಾಬಾದ್:ಭೀಕರ ಭೂಕುಸಿತಕ್ಕೆ ತುತ್ತಾಗಿ 350 ಕ್ಕೂ ಅಧಿಕ ಜನರು ಸಮಾಧಿಯಾದ ವಯನಾಡ್ ದುರಂತ ಮನಕಲುತ್ತಿದೆ. ಪ್ರಾಣ, ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ಹಲವು ನಿರ್ಗತಿಕರಾಗಿದ್ದಾರೆ. ಕೇರಳ ಸರ್ಕಾರ ಸಂತ್ರಸ್ತರಿಗೆ ಹೊಸ ನಗರ ನಿರ್ಮಿಸಿಕೊಡಲಾಗುವುದು ಎಂದು ಹೇಳಿದೆ. ಹಲವು ಚಿತ್ರರಂಗದ ನಟ, ನಟಿಯರು ತಮಗೆ ತೋಚಿದಷ್ಟು ಧನಸಹಾಯ ಘೋಷಿಸುತ್ತಿದ್ದಾರೆ.
ಮಲಯಾಳಂ ಚಿತ್ರರಂಗದ ಸೂಪರ್ಸ್ಟಾರ್ ನಟ, ಗೌರವ ಲೆಫ್ಟಿನೆಂಟ್ ಕರ್ನಲ್ ಮೋಹನ್ಲಾಲ್ 3 ಕೋಟಿ ರೂಪಾಯಿ, ತೆಲುಗು ಚಿತ್ರನಟ ಚಿರಂಜೀವಿ ಮತ್ತು ಅವರ ಪುತ್ರ ರಾಮ್ಚರಣ್ ಸೇರಿ 1 ಕೋಟಿ ರೂಪಾಯಿ, ಪುಷ್ಪಾ ಖ್ಯಾತಿಯ ಅಲ್ಲು ಅರ್ಜುನ್ 25 ಲಕ್ಷ, ನಯನತಾರಾ ಮತ್ತು ಶಿವನ್ ದಂಪತಿ 20 ಲಕ್ಷ, ಸೂರ್ಯ-ಜ್ಯೋತಿಕಾ ದಂಪತಿ 50 ಲಕ್ಷ, ತಮಿಳು ನಟ ವಿಕ್ರಮ್ 20 ಲಕ್ಷ ರೂಪಾಯಿಯನ್ನು ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.
ಮೋಹನ್ಲಾಲ್ ₹3 ಕೋಟಿ ದೇಣಿಗೆ:ಭಾರತೀಯ ಪ್ರಾದೇಶಿಕ ಸೇನೆಯ ಲೆಫ್ಟಿನೆಂಟ್ ಕರ್ನಲ್ ಆಗಿರುವ ಖ್ಯಾತ ನಟ ಮೋಹನ್ ಲಾಲ್ ಅವರು ಶನಿವಾರ ಭೂಕುಸಿತ ಪೀಡಿತ ವಯನಾಡಿನ ಹಲವು ಪ್ರದೇಶಗಳಿಗೆ ಸೇನಾ ಸಮವಸ್ತ್ರದಲ್ಲಿ ಆಗಮಿಸಿದ್ದರು. ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಬಳಿಕ ಸಂತ್ರಸ್ತರ ಪುನರ್ವಸತಿಗಾಗಿ 3 ಕೋಟಿ ರೂಪಾಯಿ ನೀಡಲಾಗುವುದು. ಹಣ ಸಂಕಷ್ಟದಲ್ಲಿರುವ ಜನರ ನೆರವಿಗೆ ಬರಲಿ ಎಂದು ತಿಳಿಸಿದರು.
ತೆಲುಗು ಚಿತ್ರನಟ ಚಿರಂಜೀವಿ ಮತ್ತು ಅವರ ಪುತ್ರ ರಾಮ್ಚರಣ್ ಅವರು 1 ಕೋಟಿ ರೂಪಾಯಿ ಘೋಷಿಸಿದ್ದಾರೆ. ಈ ಬಗ್ಗೆ ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಭೂಕುಸಿತದಲ್ಲಿ ಜೀವಹಾನಿ ಬಗ್ಗೆ ತೀವ್ರ ದುಃಖವಾಗಿದೆ. ಚರಣ್ ಮತ್ತು ನಾನು ಒಟ್ಟಾಗಿ ಸಂತ್ರಸ್ತರಿಗೆ ಬೆಂಬಲವಾಗಿ ನಿಲ್ಲಲಿದ್ದೇವೆ. ಕೇರಳ ಸಿಎಂ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ನೀಡಲಾಗುವುದು ಎಂದಿದ್ದಾರೆ.