ಮುಂಬೈ:ಪೈಲಟ್ ಮತ್ತುಸಿಬ್ಬಂದಿ ಕೊರತೆಯಿಂದಾಗಿ ವಿಸ್ತಾರಾ ವಿಮಾನಯಾನ ಸಂಸ್ಥೆ ಸೋಮವಾರ ತನ್ನ 50 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿತ್ತು. ಇದೀಗ ಮಂಗಳವಾರವಾರವೂ (ಇಂದು) ಹೆಚ್ಚಿನ ವಿಮಾನಗಳು ರದ್ದಾಗುವ ಸಾಧ್ಯತೆ ಇದ್ದು, 70ಕ್ಕೂ ಹೆಚ್ಚಿನ ವಿಮಾನಗಳ ಹಾರಾಟ ರದ್ದಾಗೊಳ್ಳಲಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ಈ ಬಗ್ಗೆ ವಿಸ್ತಾರ ಏರ್ಲೈನ್ಸ್ ಸಂಸ್ಥೆಯ ವಕ್ತಾರರು ಮಾಧ್ಯಮ ಹೇಳಿಕೆ ನೀಡಿದ್ದು, "ಸಿಬ್ಬಂದಿ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕಳೆದ ಕೆಲವು ದಿನಗಳಲ್ಲಿ ವಿಮಾನಯಾನವು ಗಮನಾರ್ಹ ಸಂಖ್ಯೆಯ ರದ್ದತಿ ಮತ್ತು ಫ್ಲೈಟ್ಗಳ ವಿಳಂಬದಂತಹ ಸಮಸ್ಯೆಯನ್ನು ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ನಮ್ಮ ನೆಟ್‌ವರ್ಕ್‌ನಾದ್ಯಂತ ಸಂಪರ್ಕ ಸರಿಪಡಿಸಲು ತಾತ್ಕಲಿಕವಾಗಿ ವಿಮಾನಗಳ ಸಂಖ್ಯೆಯನ್ನು ಕಡಿಮೆ ಮಾಡಲು ನಿರ್ಧರಿಸಿದ್ದೇವೆ. ನಾವು ಇದನ್ನು ಅಂಗೀಕರಿಸುತ್ತೇವೆ ಮತ್ತು ಗ್ರಾಹಕರಿಗೆ ಉಂಟಾದ ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ. ಅತೀ ಶೀಘ್ರದಲ್ಲಿ ಪರಿಸ್ಥಿತಿಯನ್ನು ಸರಿದೂಗಿಸಲು ನಮ್ಮ ಸಂಸ್ಥೆ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ" ಎಂದು ತಿಳಿಸಿದ್ದಾರೆ.
ಸದ್ಯ B787-9 Dreamliner ಮತ್ತು A321neo ನಂತಹ ಬೋಯಿಂಗ್ ವಿಮಾನಗಳನ್ನು ದೇಶಿಯ ಮಾರ್ಗಗಳಲ್ಲಿ ನಿಯೋಜಿಸಲಾಗಿದೆ, ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಹಾರಾಟ ನಡೆಸಬಹುದಾಗಿದೆ. ಪರ್ಯಾಯ ವಿಮಾನ ಆಯ್ಕೆಗಳೊಂದಿಗೆ ನಿಯಮಗಳ ಪ್ರಕಾರ ಗ್ರಾಹಕರಿಗೆ ಮರುಪಾವತಿಯನ್ನು ನೀಡಲಾಗುತ್ತಿದೆ ಎಂದು ಏರ್ಲೈನ್ಸ್ ಹೇಳಿದೆ.
A320 ಫ್ಲೀಟ್‌ನ ಮೊದಲ ಅಧಿಕಾರಿಗಳಿಗೆ ಮಾಸಿಕ ವೇತನವನ್ನು ಹೊಸ ಒಪ್ಪಂದದಡಿ ಪರಿಷ್ಕರಿಸಿದಾಗಿನಿಂದ ವಿಸ್ತಾರಾ ವಿಮಾನಯಾನ ಸಂಸ್ಥೆ ಈ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಮಾಧ್ಯಮ ವರದಿಗಳ ಪ್ರಕಾರ, ಈ ಹಿಂದೆ ವಿಸ್ತಾರಾ ಪೈಲಟ್‌ಗಳು 40 ಗಂಟೆಗಳ ಹಾರಾಟಕ್ಕೆ ನಿಗದಿತ ವೇತನವನ್ನು ಪಡೆಯುತ್ತಿದ್ದರು. ಅಲ್ಲದೆ, ಹೆಚ್ಚುವರಿ ಗಂಟೆಗಳ ಹಾರಾಟಕ್ಕಾಗಿ ಪ್ರತ್ಯೇಕವಾಗಿ ಪಾವತಿಸಲಾಗುತಿತ್ತು. ಪ್ರಸ್ತುತ 70 ಗಂಟೆಗಳ ಹಾರಾಟಕ್ಕೆ ವೇತನವನ್ನು ನೀಡುವ ಬಗ್ಗೆ ಪರಿಷ್ಕೃತ ವೇತನ ಪ್ರಸ್ತಾಪ ಮಾಡಲಾಗಿದ್ದು, ಇದರಿಂದ ಸಂಬಳ ಕಡಿಮೆಯಾದಂತಾಗುತ್ತದೆ ಎಂದು ಪೈಲಟ್‌ಗಳು ಬೇಸರ ವ್ಯಕ್ತಪಡಿಸಿದ್ದಾರೆ. ಸಂಸ್ಥೆಯ ಈ ಕ್ರಮದಿಂದ ಅಸಮಾಧಾನಗೊಂಡಿರುವ ಪೈಲಟ್‌ಗಳು ಅನಾರೋಗ್ಯದ ಕಾರಣ ನೀಡಿ ಎಮರ್ಜೆನ್ಸಿ ರಜೆ ಪಡೆಯುತ್ತಿರುವುದು ವಿಮಾನಗಳ ರದ್ದತಿಗೆ ಕಾರಣವಾಗಿದೆ.
ಇದನ್ನೂ ಓದಿ:ಇನ್ಮುಂದೆ ಇಂಧನ ವಾಹನಗಳು ಇರೋದಿಲ್ಲ; ಭವಿಷ್ಯದಲ್ಲಿ ಪ್ರತಿ ಮನೆಯಲ್ಲೂ ಎಲೆಕ್ಟ್ರಿಕ್ ಕಾರುಗಳದ್ದೇ ದರ್ಬಾರ್ - Nitin Gadkari On Fuel Vehicles