ಬಹ್ರೈಚ್(ಉತ್ತರ ಪ್ರದೇಶ):ರಾಜ್ಯದ ಮಹ್ಸಿ ತಹಸಿಲ್ನಲ್ಲಿ ಆತಂಕ ಸೃಷ್ಟಿಸಿದ್ದ ಆರು ನರಭಕ್ಷಕ ತೋಳಗಳ ಗುಂಪಿನ ಕೊನೆಯ ತೋಳವನ್ನು ಸ್ಥಳೀಯರು ಜಿಲ್ಲೆಯ ತಮಾಚ್ ಪುರ ಗ್ರಾಮದಲ್ಲಿ ಕೊಂದು ಹಾಕಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ರಾಮ್ ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ಕೊಲ್ಲಲ್ಪಟ್ಟ ತೋಳವು ಹೆಣ್ಣು ತೋಳವಾಗಿದ್ದು, ಈ ಹಿಂದೆ ಶಂಕಿಸಿದಂತೆ ಅದು ಕುಂಟ ತೋಳವಲ್ಲ ಎಂದು ಅಧಿಕಾರಿಗಳು ಹೇಳಿದರು. ತೋಳದ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಶನಿವಾರ ತಡರಾತ್ರಿ ಮಹ್ಸಿ ತಹಸಿಲ್ನ ರಾಮ್ ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ತಮಾಚ್ ಪುರ ಗ್ರಾಮದಲ್ಲಿ ಜನ ತೋಳವನ್ನು ಕೊಂದಿದ್ದಾರೆ ಎಂಬ ಮಾಹಿತಿ ನಮಗೆ ಬಂದಿತ್ತು. ನಾವು ಅಲ್ಲಿಗೆ ತಲುಪಿದಾಗ, ಸತ್ತ ತೋಳ ಮತ್ತು ಮೇಕೆಯ ದೇಹಗಳು ಕಂಡು ಬಂದಿವೆ. ತೋಳದ ದೇಹದ ಮೇಲೆ ಗಾಯದ ಗುರುತುಗಳಿದ್ದು, ರಕ್ತಸ್ರಾವವಾಗುತ್ತಿತ್ತು" ಎಂದು ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್ಒ) ಅಜಿತ್ ಪ್ರತಾಪ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.
"ಸೂಕ್ಷ್ಮವಾಗಿ ಪರಿಶೀಲಿಸಿದಾಗ ಸತ್ತ ತೋಳವು ವಯಸ್ಕ ಹೆಣ್ಣು ತೋಳವಾಗಿರುವುದು ತಿಳಿದು ಬಂದಿದೆ. ಈ ತೋಳವು ಜನವಸತಿ ಪ್ರದೇಶಕ್ಕೆ ಪ್ರವೇಶಿಸಿ ಮೇಕೆಯೊಂದನ್ನು ಕಚ್ಚಿಕೊಂಡು ಹೋಗುತ್ತಿದ್ದಾಗ ಅದನ್ನು ತಡೆದ ಗ್ರಾಮಸ್ಥರು, ಅದನ್ನು ಸುತ್ತುವರಿದು ಕೊಂದು ಹಾಕಿದ್ದಾರೆ. ಸತ್ತ ತೋಳವನ್ನು ಮರಣೋತ್ತರ ಪರೀಕ್ಷೆಗಾಗಿ ವಲಯ ಕಚೇರಿಗೆ ತರಲಾಗಿದೆ" ಎಂದು ಅವರು ಹೇಳಿದರು.