ವಾರಾಣಸಿ (ಉತ್ತರ ಪ್ರದೇಶ):ವಿವಾದಿತ ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದೂಗಳಿಗೆ ಮೊದಲ ದೊಡ್ಡ ಜಯ ಸಿಕ್ಕಿದೆ. ಜ್ಞಾನವಾಪಿ ಪ್ರದೇಶದಲ್ಲಿ ಪತ್ತೆಯಾದ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಾರಾಣಸಿ ಜಿಲ್ಲಾ ಕೋರ್ಟ್ ಬುಧವಾರ ಅಂಗೀಕರಿಸಿದೆ. ಶಿವಲಿಂಗಕ್ಕೆ ಪೂಜೆ ಸಲ್ಲಿಸಲೂ ಅವಕಾಶ ನೀಡಿದೆ.
ಮೂಲ ಕಾಶಿ ವಿಶ್ವನಾಥ ಎಂದು ಹೇಳಲಾಗುವ ಶಿವಲಿಂಗಕ್ಕೆ ಹಿಂದೂಗಳು ಪೂಜೆ ಸಲ್ಲಿಸಬಹುದಾಗಿದೆ. ಇದಕ್ಕಾಗಿ ಮುಂದಿನ 7 ದಿನಗಳಲ್ಲಿ ಅಗತ್ಯ ಕ್ರಮಕೈಗೊಳ್ಳಿ ಎಂದು ಕೋರ್ಟ್ ತಿಳಿಸಿದ್ದಾಗಿ ಹಿಂದು ಪರ ವಕೀಲ ವಿಷ್ಣು ಶಂಕರ್ ಜೈನ್ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಮಸೀದಿ ಆವರಣದಲ್ಲಿ ವಾಜುಖಾನಾ ಪ್ರದೇಶದಲ್ಲಿ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಸರ್ವೇ ನಡೆಸುತ್ತಿರುವ ವೇಳೆ ಶಿವಲಿಂಗ ಪತ್ತೆಯಾಗಿತ್ತು. ಇದು ಕಾಶಿಯ ಮೂಲ ವಿಶ್ವನಾಥ ಎಂದು ಹೇಳಲಾಗಿದೆ. ಹಿಂದೂಗಳ ಆರಾಧ್ಯದೈವವಾದ ಶಿವನು ಹಾಳು ಪ್ರದೇಶದಲ್ಲಿ ಬಿದ್ದಿದ್ದು, ಅದನ್ನು ಶುಚಿ ಮಾಡಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಹಿಂದುಗಳು ಅರ್ಜಿ ಸಲ್ಲಿಸಿದ್ದರು.
ಏಳು ದಿನಗಳಲ್ಲಿ ಪೂಜೆ:ಹಿಂದು ಪರ ವಕೀಲ ವಿಷ್ಣು ಜೈನ್ ಮಾತನಾಡಿ, ಜ್ಞಾನವಾಪಿ ಮಸೀದಿ ಸಂಕೀರ್ಣದೊಳಗಿನ ಶಿವಲಿಂಗಕ್ಕೆ ಪೂಜೆ ಮಾಡಲು ವಾರಾಣಸಿ ಜಿಲ್ಲಾ ನ್ಯಾಯಾಲಯ ಬುಧವಾರ ಅವಕಾಶ ನೀಡಿದೆ. ನಿರ್ಬಂಧಿಸಲಾಗಿರುವ ಪ್ರದೇಶದಲ್ಲಿ ಇರುವ ಶಿವನಿಗೆ ಮುಂದಿನ 7 ದಿನಗಳಲ್ಲಿ ಪೂಜೆ ನಡೆಯಲಿದೆ. ಇದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಕೋರ್ಟ್ ಸೂಚನೆ ನೀಡಿದೆ ಎಂದರು. ಶಿವಲಿಂಗಕ್ಕೆ ಎಲ್ಲರೂ ಪೂಜೆ ಮಾಡುವ ಹಕ್ಕಿದೆ. ಇದನ್ನು ಕೋರ್ಟ್ ಕೂಡ ಅಂಗೀಕರಿಸಿದೆ. ಪ್ರಕರಣದಲ್ಲಿ ಹಿಂದೂಗಳ ಪಾಲಿಗೆ ಸಿಕ್ಕ ಮೊದಲ ಜಯ ಇದಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.