ಡೆಹ್ರಾಡೂನ್(ಉತ್ತರಾಖಂಡ):ನಮ್ಮ ಸರ್ಕಾರ ಏಕರೂಪ ನಾಗರಿಕ ಸಂಹಿತೆಯನ್ನು ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ. ನಮ್ಮಂತೆ ದೇಶದ ಇತರ ರಾಜ್ಯಗಳು ಇದೇ ರೀತಿಯ ಕಾನೂನನ್ನು ಅಂಗೀಕರಿಸಬೇಕು ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದರು.
ಇದು ಸಾಮಾನ್ಯ ಮಸೂದೆ ಅಲ್ಲ. ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಇಂತಹ ಕಾನೂನು ತರುವುದು ಅಷ್ಟು ಸುಲಭವಲ್ಲ. ಆದರೆ, ಇದನ್ನು ಉತ್ತರಾಖಂಡ ಮಾಡಿ ತೋರಿಸಿದೆ. ಸಂವಿಧಾನ ರಚನೆಕಾರರ ನಿಜವಾದ ಕನಸು ನನಸಾಗಲಿದೆ. ಇದೇ ಹಾದಿಯಲ್ಲಿ ದೇಶದ ಇತರ ರಾಜ್ಯಗಳು ನಡೆಯಲಿ ಎಂದು ಧಾಮಿ ವಿಧಾನಸಭೆಯಲ್ಲಿ ಮಾತನಾಡುವ ವೇಳೆ ಸಲಹೆ ನೀಡಿದರು.
ಜೊತೆಗೆ, ಮಸೂದೆಯಲ್ಲಿನ ನಿಯಮಗಳ ಬಗ್ಗೆಯೂ ವಿವರವಾಗಿ ಹೇಳಿದ ಸಿಎಂ, ವಿರೋಧ ಪಕ್ಷದ ಶಾಸಕರೂ ಯುಸಿಸಿ ಮಸೂದೆಯನ್ನು ವಿರೋಧಿಸುತ್ತಿಲ್ಲ. ಆದರೆ, ಅದರಲ್ಲಿನ ನಿಬಂಧನೆಗಳನ್ನು ವಿವರವಾಗಿ ಪರಿಶೀಲಿಸಬೇಕಾಗಿದೆ. ಅಂಗೀಕಾರದ ಮೊದಲು ಕೆಲವು ತೊಡಕುಗಳನ್ನು ಸರಿಪಡಿಸಲು ಸಲಹೆ ನೀಡಿದ್ದಾರೆ ಎಂದರು.
ಲಿವ್ಇನ್ ನಿಬಂಧನೆ ಖಾಸಗಿತನಕ್ಕೆ ಹೊಡೆತ:ಪ್ರಸ್ತಾವಿತ ಮಸೂದೆಯಲ್ಲಿ, ಲಿವ್-ಇನ್ ಸಂಬಂಧಗಳ ನೋಂದಣಿ ಮತ್ತು 21 ವರ್ಷದೊಳಗಿನ ಲಿವ್-ಇನ್ ಜೋಡಿಗಳು ಪೋಷಕರಿಗೆ ಮಾಹಿತಿ ನೀಡಿ ಮುಂದುವರಿಯಬೇಕು ಎಂಬ ನಿಬಂಧನೆ ಹಾಕಲಾಗಿದೆ. ಇದು ಯುವಕರ ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಭುವನ್ ಚಂದ್ರ ಕಪ್ರಿ ಆಕ್ಷೇಪ ವ್ಯಕ್ತಪಡಿಸಿದರು. ಮದುವೆಗಳ ಕಡ್ಡಾಯ ನೋಂದಣಿ, ಬಾಲ್ಯವಿವಾಹ ನಿಷೇಧ ಮತ್ತು ಕನಿಷ್ಠ ವಿವಾಹದ ವಯಸ್ಸು ಮುಂತಾದ ಹಲವು ನಿಬಂಧನೆಗಳು ಈಗಾಗಲೇ ಅಸ್ತಿತ್ವದಲ್ಲಿವೆ. ಅವುಗಳಲ್ಲಿ ಹೊಸದೇನೂ ಇಲ್ಲ ಎಂದು ಅವರು ಹೇಳಿದರು.