ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶ ರಾಜಧಾನಿ ಲಖನೌಗೆ ಪ್ರಯಾಣಿಸಬೇಕಿದ್ದ ಏರ್ ಇಂಡಿಯಾ ವಿಮಾನವು ತಾಂತ್ರಿಕ ದೋಷದಿಂದಾಗಿ ದುಬೈ ವಿಮಾನ ನಿಲ್ದಾಣದಲ್ಲಿ ಸೋಮವಾರ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುಬೈನಿಂದ ಸೋಮವಾರ ಮುಂಜಾನೆ 4 ಗಂಟೆಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು (ಸಂಖ್ಯೆ ಐಎಕ್ಸ್194) ಬೆಳಗ್ಗೆ 9:30ಕ್ಕೆ ಲಖನೌ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, ಸುಮಾರು 90 ನಿಮಿಷಗಳ ನಂತರ ಕೆಲವು ತಾಂತ್ರಿಕ ತೊಂದರೆಗಳನ್ನು ಉಲ್ಲೇಖಿಸಿ, ವಿಮಾನವು ದುಬೈ ವಿಮಾನ ನಿಲ್ದಾಣಕ್ಕೆ ಹಿಂತಿರುಗಿತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವಿಮಾನದ ಎಮರ್ಜೆನ್ಸಿ ಲ್ಯಾಂಡಿಂಗ್ ವಿಷಯ ತಿಳಿದ ಪ್ರಯಾಣಿಕರು ಗಲಿಬಿಲಿಗೊಂಡರು. ಅಲ್ಲದೇ, ಹಠಾತ್ ತುರ್ತು ಲ್ಯಾಂಡಿಂಗ್‌ಗೆ ಕಾರಣವನ್ನು ವಿಮಾನ ಸಿಬ್ಬಂದಿ ನೀಡಿಲ್ಲ. ಆದ್ದರಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಿಬ್ಬಂದಿಯ ಮೇಲೆ ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ 'ಎಕ್ಸ್'ನಲ್ಲಿ ಪ್ರಯಾಣಿಕರು ಪ್ರಶ್ನೆಗಳನ್ನು ಕೇಳಿದಾಗ, ತುರ್ತು ಲ್ಯಾಂಡಿಂಗ್‌ಗೆ ಕಾರ್ಯಾಚರಣೆ ಕಾರಣವನ್ನು ವಿಮಾನಯಾನ ಸಂಸ್ಥೆ ನೀಡಿದೆ.
ಸೋಮವಾರ ಒಟ್ಟಾರೆ ಲಖನೌ ವಿಮಾನ ನಿಲ್ದಾಣದಲ್ಲಿ ನಾಲ್ಕು ವಿಮಾನಗಳನ್ನು ರದ್ದುಗೊಳಿಸಲಾಗಿತ್ತು. ಅನೇಕ ವಿಮಾನಗಳು ಸಹ ನಿಗದಿತ ಸಮಯಕ್ಕಿಂತ ವಿಳಂಬವಾಗಿ ಹಾರಾಟ ಮಾಡಿವೆ. ಸೋಮವಾರ ಮಧ್ಯಾಹ್ನ 3 ಗಂಟೆಗೆ ಲಖನೌದಿಂದ ಕಿಶನ್‌ಗಢಕ್ಕೆ ಹೊರಡಬೇಕಿದ್ದ ಸ್ಟಾರ್ ಏರ್ ವಿಮಾನ, ಸಂಜೆ 7:50ಕ್ಕೆ ಬೆಂಗಳೂರಿಗೆ ಇಂಡಿಗೋ ವಿಮಾನದ ಹಾರಾಟ ರದ್ದು ಮಾಡಲಾಗಿತ್ತು. ಅದೇ ರೀತಿ, ಬೆಂಗಳೂರಿನಿಂದ ಸಂಜೆ 7:20ಕ್ಕೆ ಲಖನೌಗೆ ಹೊರಡಬೇಕಿದ್ದ ವಿಮಾನವನ್ನೂ ಸಹ ರದ್ದುಗೊಳಿಸಲಾಗಿತ್ತು.
ಇದನ್ನೂ ಓದಿ:ಶಿವಮೊಗ್ಗದಲ್ಲಿ ಹವಾಮಾನ ವೈಪರೀತ್ಯ: ಸಚಿವ ಪರಮೇಶ್ವರ್ ಇದ್ದ ವಿಮಾನ ಲ್ಯಾಂಡಿಂಗ್‌ಗೆ ಅಡ್ಡಿ, ಬೆಂಗಳೂರಿಗೆ ವಾಪಸ್!