ಕರ್ನಾಟಕ

karnataka

ETV Bharat / bharat

ಕುಂಭ ಸ್ನಾನದ ಬಳಿಕ ಕನಸಿನಲ್ಲಿ ಬಂದ ತಾಯಿ; 32 ವರ್ಷಗಳ ಬಳಿಕ ಸಂತನಾಗಿ ಮನೆಗೆ ಬಂದ ಮಗ! - SAINT SON MEET MOTHER

1992ರಲ್ಲಿ ಅಯೋಧ್ಯಾ ಕರ ಸೇವೆಗೆ ಎಂದು ಮನೆ ಬಿಟ್ಟವ, ಆ ಬಳಿಕ ಮನೆಗೆ ಹಿಂತಿರುಗಿರಲಿಲ್ಲ. ಆದರೆ ಮಹಾಕುಂಭದ ವೇಳೆ ಮಗ ಮನೆಗೆ ಮರಳಿದ್ದಾರೆ. ಕುಟುಂಬದಲ್ಲೀಗ ಸಂತಸದ ಹೊನಲು ಹರಿದಿದೆ.

up-saint-son-meet-mother-after-32-years-returned-home-after-mahakumbh-snan-2025
ಮಹಾಕುಂಭದ ಸ್ನಾನದ ಬಳಿಕ ಕನಸಿನಲ್ಲಿ ಬಂದ ತಾಯಿ; 32 ವರ್ಷಗಳ ಬಳಿಕ ಮನೆಗೆ ಬಂದ ಮಗ (ETV Bharat)

By ETV Bharat Karnataka Team

Published : Feb 20, 2025, 7:25 AM IST

ಮಿರ್ಜಾಪುರ, ಉತ್ತರಪ್ರದೇಶ:ಜಮಾಲಪುರದ ಕುಟುಂಬವೊಂದರಲ್ಲಿ 32 ವರ್ಷಗಳ ನಂತರ ಸಂತಸದ ಹೊನಲು ಉಕ್ಕಿ ಹರಿದಿದೆ. 32 ವರ್ಷಗಳಿಂದ ಕಾಯುತ್ತಿದ್ದ ಹಣ್ಣು ಹಣ್ಣಾದ ತಾಯಿಗೆ ತನ್ನ ಹೆತ್ತ ಮಗ ಸಿಕ್ಕಿದ್ದಾನೆ. ಅದೇ ಸಮಯದಲ್ಲಿ ಕಳೆದುಕೊಂಡ ಗಂಡನನ್ನು ಹೆಂಡತಿ ಪಡೆದುಕೊಂಡಿದ್ದಾರೆ. ಈ ಅಚ್ಚರಿಯ ಸಮಾಗಮಕ್ಕೆ ಹೇಳಲಾರದಷ್ಟು ಆನಂದವನ್ನುಂಟು ಮಾಡಿದೆ.

ಆಗ 1992.. ಅಯೋಧ್ಯೆಯಲ್ಲಿ ದೊಡ್ಡ ಆಂದೋಲನವೇ ನಡೆದಿದ್ದು ಎಲ್ಲರಿಗೂ ತಿಳಿದ ವಿಚಾರ. ಆ ಸಮಯದಲ್ಲಿ ಕರ ಸೇವೆಗೆ ಎಂದು ಮನೆ ತೊರೆದಿದ್ದ ಜಮಾಲ್​​​​ಪುರದ ನಿವಾಸಿ ಅಮರನಾಥ್ ಗುಪ್ತಾ ಅವರ ಬಗ್ಗೆ ನಾವು ಇಂದು ಹೇಳಲು ಹೊರಟಿದ್ದೇವೆ. ಅಂದು ಕರಸೇವೆಗಾಗಿ ಮನೆ ತೊರೆದಿದ್ದ ಅಮರನಾಥ, ಮನೆಗೆ ವಾಪಸ್​ ಆಗಿರಲಿಲ್ಲ. ಏಕೆಂದರೆ ಅಯೋಧ್ಯೆಯಲ್ಲಿ ಕರಸೇವೆ ಮಾಡಿ ಜೈಲು ಸೇರಿದ್ದರು. ಜೈಲಿನಿಂದ ಹೊರಬಂದ ನಂತರ ಅವರು ಅಯೋಧ್ಯೆ ಮತ್ತು ವೃಂದಾವನಕ್ಕೆ ಹೋಗಿ ಸೇವಾ ಕೈಂಕರ್ಯದಲ್ಲಿ ನಿರತರಾಗಿದ್ದರು.

ತಾಯಿ ಮಗನನ್ನು ಒಂದು ಮಾಡಿದ ಕುಂಭಮೇಳ:ಕುಂಭಮೇಳದ ಹಿನ್ನೆಲೆ ಅಮರನಾಥ ಗುಪ್ತಾ ಅವರು ತ್ರಿವೇಣಿ ಸಂಗಮದಲ್ಲಿ ಸ್ನಾನಕ್ಕೆ ತೆರಳಿದ್ದರು. ಸ್ನಾನದ ಬಳಿಕ ಅವರಿಗೆ ತನ್ನ ತಾಯಿಯ ನೆನಪಾಗಿದೆ. ಹೀಗಾಗಿ ಆತ ತಾಯಿ ನೋಡುವ ಬಯಕೆಯಾಗಿತ್ತು. ಹೀಗಾಗಿ ಅಮರನಾಥ ಗುಪ್ತಾ ಅವರ ಮನೆ ಬಾಗಿಲು ತಟ್ಟಿದ್ದರು. ಈ ವೇಳೆ ಮನೆಯೊಳಗಿದ್ದ ವೃದ್ಧ ತಾಯಿ ಪ್ಯಾರಿದೇವಿ ನನ್ನ ಮಗ ಬಂದಿದ್ದಾನೆ ಹೋಗಿ ಬಾಗಿಲು ತೆರೆ ಎಂದು ಸೊಸೆ ಚಂದ್ರಾವತಿಗೆ (ಅಮರನಾಥ ಪತ್ನಿ) ಹೇಳಿದ್ದಾರೆ. ಆಗ ಸೊಸೆ ಚಂದ್ರಾವತಿ ಮಲಗು, ಅವರು ಇನ್ನಿಲ್ಲ, ಅವರು ಎಲ್ಲಿಂದ ಬರುತ್ತಾರೆ ಎಂದಿದ್ದರು. ಆದರೆ, ವಯಸ್ಸಾದ ತಾಯಿ ಇದನ್ನು ಒಪ್ಪದೇ, ತನ್ನ ಸೊಸೆಯೊಂದಿಗೆ ಬಾಗಿಲು ತೆರೆದಿದ್ದರು. ಬಾಗಿಲು ತೆರೆದ ತಕ್ಷಣ, ಅವರ ಮುಂದೆ ಒಬ್ಬ ಸಂತನ ವೇಷ ಧರಿಸಿದ ಮಗ ಕಾಣಿಸಿಕೊಂಡಿದ್ದ. ಬಹಳ ವರ್ಷಗಳ ನಂತರ ಭೇಟಿಯಾದ ತಾಯಿ ಮತ್ತು ಮಗನ ಕಣ್ಣಲ್ಲಿ ಪ್ರೀತಿಯ ಕಣ್ಣೀರ ಧಾರೆಯಾಗಿ ಹರಿಯಿತು. ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡರು ಆನಂದತುಳಿತರಾದರು. ತಾಯಿ ತನ್ನ ಮಗನ ತಲೆಯನ್ನು ಪ್ರೀತಿಯಿಂದ ನೇವರಿಸಿ ಮುದ್ದಿಸಿ ತನ್ನ ಪ್ರೀತಿಯ ಧಾರೆ ಎರೆದಳು. ಅದೇ ವೇಳೆಗೆ 32 ವರ್ಷಗಳ ನಂತರ ಪತಿಯನ್ನು ಕಂಡ ಚಂದ್ರಾವತಿಯ ಕಣ್ಣೀರಾದರು.

ಕಣ್ಮರೆ ಆಗಿದ್ದು ಯಾಕೆ? : ಜಮಾಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜಮಾಲ್‌ಪುರ ನಿವಾಸಿ ಅಮರನಾಥ್ ಗುಪ್ತಾ ಅವರು 1992 ರಲ್ಲಿ ಅಯೋಧ್ಯೆ ಚಳವಳಿ ಸಂದರ್ಭದಲ್ಲಿ ಕರ ಸೇವಕರ ಗುಂಪಿನೊಂದಿಗೆ ಅಯೋಧ್ಯಾಗೆ ತೆರಳಿದ್ದರು. ಕರಸೇವೆ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಜಾನ್‌ಪುರದಲ್ಲಿ ರೈಲಿನ ಮೇಲೆ ಕಲ್ಲು ತೂರಾಟ ಪ್ರಾರಂಭವಾಯಿತು. ಈ ವೇಳೆ ರೈಲಿನಿಂದ ಇಳಿದಾಗ ಬಂಧಿಸಿ ಮಿರ್ಜಾಪುರ ಜೈಲಿನಲ್ಲಿ ಇರಿಸಿದರು. ಜೈಲು ಶಿಕ್ಷೆ ಮುಗಿಸಿ ಬಿಡುಗಡೆಯಾದ ಬಳಿಕ, ಮನೆಗೆ ಹೋಗಲು ಮನಸ್ಸು ಬಾರದ ಕಾರಣ ಮನೆಯವರಿಗೆ ತಿಳಿಸದೆ ಅಯೋಧ್ಯೆಗೆ ತೆರಳಿದ್ದರು. ಅಲ್ಲಿ ಒಂದಿಷ್ಟು ದಿನ ಇದ್ದ ಅಮರನಾಥ, ಬಳಿಕ ವೃಂದಾವನಕ್ಕೆ ಹೋಗಿದ್ದರು. ಅಲ್ಲಿ ಬಾಬಾ ಕಿಶೋರ್ ದಾಸ್ ಅವರಿಂದ ದೀಕ್ಷೆ ಪಡೆದುಕೊಂಡು, ಅವರ ಜೈಪುರ ಆಶ್ರಮದಲ್ಲಿ ವಾಸವಾಗಿದ್ದಾರೆ.

ತಾಯಿಯ ನೋಡುವ ಬಯಕೆ ಸೃಷ್ಟಿಯಾಗಿದ್ದು ಹೇಗೆ?:ಜೈಪುರದ ಬಾಬಾ ಕಿಶೋರ್​ ದಾಸ್​ ಅವರ ಆಶ್ರಮದಲ್ಲಿರುವ ಅಮರನಾಥ, ಮಹಾಕುಂಭದಲ್ಲಿ ಸ್ನಾನ ಮಾಡಲು ಪ್ರಯಾಗರಾಜ್​ ಗೆ ಬಂದಿದ್ದರು. ಈ ಸಮಯದಲ್ಲಿ ಅವರ ತಾಯಿ ಕನಸಿನಲ್ಲಿ ಬಂದಿದ್ದರು. ಹೀಗಾಗಿ ತಾಯಿಯನ್ನು ನೋಡುವ ಬಯಕೆಯೊಂದಿಗೆ ಭಾನುವಾರ ತಾಯಿಯನ್ನು ಭೇಟಿಯಾಗಲು ಮನೆಗೆ ಬಂದೆ ಎಂದು ತಮ್ಮ ಹಿಂದಿನ ಕಥೆಯನ್ನು ಹೇಳಿಕೊಂಡಿದ್ದಾರೆ ಅಮರ್ ನಾಥ್ ಗುಪ್ತಾ. ಕಳೆದ 32 ವರ್ಷಗಳಿಂದ ಕಣ್ಮರೆಯಾಗಿ, ಮಹಾಕುಂಭದ ಮಹಿಮೆಯಿಂದ ತಾಯಿಯನ್ನ ಕನಸಿನಲ್ಲಿ ಕಂಡು ನನಸು ಮಾಡಿಕೊಂಡಿದ್ದಾರೆ. ಈಗ ಇವರನ್ನು ನೋಡಲು ಹತ್ತಿರದ ಪ್ರದೇಶಗಳಿಂದ ಕೂಡಾ ಜನರು ಬರುತ್ತಿದ್ದಾರೆ.

ಅಮರನಾಥ ಅವರ ಬಗ್ಗೆ ಒಂದಿಷ್ಟು: ಅಮರನಾಥ ಗುಪ್ತಾ ಅವರು ತಮ್ಮ ವ್ಯಾಸಂಗದ ಅವಧಿಯಲ್ಲಿ ವಿಶ್ವ ಹಿಂದೂ ಪರಿಷತ್ ಗೆ ಸೇರ್ಪಡೆಗೊಂಡಿದ್ದರು. ಅಷ್ಟೇ ಅಲ್ಲ ಶಾಖೆಯನ್ನೂ ನಡೆಸುತ್ತಿದ್ದರು. ಅಮರನಾಥಗೆ 95 ವರ್ಷದ ತಾಯಿ ಪ್ಯಾರಿ ದೇವಿ, ಪತ್ನಿ ಚಂದ್ರಾವತಿ, ಮಗ ಅತುಲ್, ಮಗಳು ಅರ್ಚನಾ ಅಂಜನಾ ಮೋನಿ ಮತ್ತು ಏಳು ಸಹೋದರಿಯರಿದ್ದಾರೆ. ಇವರೆಲ್ಲ ಈಗ ತುಂಬಾ ಸಂತೋಷಗೊಂಡಿದ್ದಾರೆ.

ಬಾಬಾ ಕಿಶೋರದಾಸ್​ ರಿಂದ ದೀಕ್ಷೆ ಪಡೆದಿರುವ ಹಿನ್ನೆಲೆಯಲ್ಲಿ ಅವರು ಜೈಪುರದ ಆಶ್ರಮದಲ್ಲಿದ್ದಾರೆ. ಅಲ್ಲಿಯೇ ಅವರು ತಮ್ಮ ಸೇವಾ ಕೈಂಕರ್ಯ ಮುಂದುವರಿಸಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಅಮರನಾಥ ಗುಪ್ತಾ ಅವರು, ಮಹಾಕುಂಭದಲ್ಲಿ ಸ್ನಾನ ಮಾಡಿದ ನಂತರ ನನ್ನ ಕನಸಿನಲ್ಲಿ ನನ್ನ ತಾಯಿ ಬಂದಿದ್ದರಿಂದ ನೆನಪಾಯಿತು, ಆದ್ದರಿಂದ ನಾನು ಮಾತೋಶ್ರೀ ಭೇಟಿಯಾಗಲು ಬಂದಿದ್ದೇನೆ. ಎರಡು ದಿನ ಇದ್ದು ನಂತರ ಆಶ್ರಮಕ್ಕೆ ಹೋಗುತ್ತೇನೆ ಎಂದು ಹೇಳಿದರು.

ಅಮರನಾಥ ಗುಪ್ತಾ ಅವರಿಗೆ ಈಗ 72 ವರ್ಷ. ಮನೆ ಬಿಟ್ಟಾಗ ಅವರಿಗೆ ಸುಮಾರು 40 ವರ್ಷ. ಹೆಂಡತಿ, ಮಗ, ಮತ್ತು ಹೆಣ್ಣು ಮಕ್ಕಳಿದ್ದಾರೆ. ಎಲ್ಲರಿಗೂ ಮದುವೆಯಾಗಿದೆ. ಕುಟುಂಬದ ಬಹುತೇಕ ಸದಸ್ಯರು ಮುಂಬೈನಲ್ಲಿ ಕೆಲಸ ಮಾಡುತ್ತಾರೆ ಮತ್ತು ವ್ಯಾಪಾರ ಮಾಡುತ್ತಾರೆ. ಮನೆಗೆ ಹಿಂದಿರುಗಿದ ಸುದ್ದಿ ಸಿಗುತ್ತಿದ್ದಂತೆ ಅವರೆಲ್ಲ ಊರಿನತ್ತ ಹೊರಟಿದ್ದಾರೆ.

ಕುಟುಂಬದ ಪ್ರಕಾರಶೀಘ್ರದಲ್ಲೇ ಈ ಎಲ್ಲ ಸದಸ್ಯರು ಅವರನ್ನು ಭೇಟಿಯಾಗಲಿದ್ದಾರೆ. ಇದೇ ವೇಳೆ, 32 ವರ್ಷಗಳ ಬಳಿಕ ಊರಿಗೆ ಬಂದ ಅಮರನಾಥರನ್ನು ನೋಡಲು ಹಳ್ಳಿಯ ಅನೇಕ ಪರಿಚಿತರೂ ಬರುತ್ತಿದ್ದಾರೆ. 32 ವರ್ಷಗಳ ನಂತರ ಅವರು ಮನೆಗೆ ಮರಳಿದ ಸುದ್ದಿ ತಿಳಿಯುತ್ತಿದ್ದಂತೆ, ಅವರನ್ನು ಭೇಟಿ ಮಾಡಲು ದೂರದೂರುಗಳಿಂದ ಸಂಬಂಧಿಕರು ಸಹ ಆಗಮಿಸುತ್ತಿದ್ದಾರೆ. ಮನೆಯಲ್ಲಿ ಈಗ ಸಂತಸದ ವಾತಾವರಣವಿದೆ. ಎರಡು ದಿನಗಳ ನಂತರ ಜೈಪುರದಲ್ಲಿರುವ ತಮ್ಮ ಆಶ್ರಮಕ್ಕೆ ಮರಳುವುದಾಗಿ ಅಮರನಾಥ ಗುಪ್ತಾ ಹೇಳುತ್ತಾರೆ. ಅವರು ತಮ್ಮ ಕುಟುಂಬ ಸದಸ್ಯರನ್ನು ಭೇಟಿಯಾಗಿ ಆನಂದಿಸಿದ್ದಾರೆ. ಗುರು ದೀಕ್ಷೆ ತೆಗೆದುಕೊಂಡಿರುವುದರಿಂದ ಸನ್ಯಾಸಿಯಾಗಿ ಜೀವನ ಮುಂದುವರೆಸುವುದು ಅವರ ಬಯಕೆ ಆಗಿದೆ.

ಇದನ್ನು ಓದಿ:

ಅರುಣಾಚಲ ಪ್ರದೇಶದಲ್ಲಿ ಕರಗುತ್ತಿವೆ ಹಿಮನದಿಗಳು: 32 ವರ್ಷಗಳಲ್ಲಿ 100ಕ್ಕೂ ಹೆಚ್ಚು ಗ್ಲೇಸಿಯರ್ಸ್ ಕಣ್ಮರೆ

ಮಹಾಕುಂಭ ಮೇಳದ ಮುಕ್ತಾಯದ ದಿನಾಂಕ ವಿಸ್ತರಣೆ?: ಪ್ರಯಾಗ್‌ರಾಜ್ ಡಿಸಿ ಸ್ಪಷ್ಟನೆ ಹೀಗಿದೆ!

ABOUT THE AUTHOR

...view details