ಇಂದೋರ್(ಮಧ್ಯಪ್ರದೇಶ): ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 'ಬೇಟಿ ಬಚಾವೋ, ಬೇಟಿ ಪಢಾವೋ' ಎಂಬ ವಿಶೇಷ ಕಾರ್ಯಕ್ರಮವನ್ನು ಒಂಭತ್ತು ವರ್ಷಗಳ ಹಿಂದೆ ಜಾರಿಗೆ ತಂದಿತ್ತು. 2015ರಲ್ಲಿ ಅನುಷ್ಠಾನಕ್ಕೆ ತಂದಿರುವ ಈ ಅಭಿಯಾನವು ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. ಇಂದಿಗೂ ಇದು ಮುಂದುವರೆದಿದೆ. ಆದರೆ, ಈಗ ಮೂರನೇ ಅವಧಿಯ ಎನ್ಡಿಎ ಸರ್ಕಾರದಲ್ಲಿ ಹೊಸದಾಗಿ ಸಚಿವರಾದ ಸಾವಿತ್ರಿ ಠಾಕೂರ್ ಈ ಘೋಷವಾಕ್ಯವನ್ನು ತಪ್ಪಾಗಿ ಬರೆದು ಪೇಚಿಗೆ ಸಿಲುಕಿರುವ ಪ್ರಸಂಗ ಮಧ್ಯಪ್ರದೇಶದಲ್ಲಿ ನಡೆಯಿತು.
ದೇಶದೆಲ್ಲೆಡೆ ಈಗ ಶಾಲಾರಂಭದ ದಿನಗಳು. ಮಧ್ಯಪ್ರದೇಶದ ಧಾರ್‌ನಲ್ಲಿ ಮಂಗಳವಾರ ಶಾಲಾ ಪ್ರವೇಶೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ರಾಜ್ಯ ಸಚಿವೆ ಸಾವಿತ್ರಿ ಠಾಕೂರ್ ಕಾರ್ಯಕ್ರಮ ಉದ್ಘಾಟಕರಾಗಿ ಪಾಲ್ಗೊಂಡಿದ್ದರು. ಇದೇ ವೇಳೆ, ಶಿಕ್ಷಣ ಇಲಾಖೆಯ ಜಾಗೃತಿ ರಥಕ್ಕೂ ಚಾಲನೆ ನೀಡಿದರು. ಈ ಜಾಗೃತಿ ರಥದ ಮೇಲೆ 'ಬೇಟಿ ಬಚಾವೋ, ಬೇಟಿ ಪಢಾವೋ' ಎಂಬ ಘೋಷವಾಕ್ಯವನ್ನು ಬರೆಯಬೇಕಿತ್ತು.
'ಬೇಟಿ' ಬದಲು 'ಬೇಡಿ' ಎಂದು ಬರೆದರು!:ಆದರೆ, ಕೇಂದ್ರ ಸಚಿವೆ ಸಾವಿತ್ರಿ ಠಾಕೂರ್ ತಮ್ಮದೇ ಸರ್ಕಾರದ ಘೋಷವಾಕ್ಯವನ್ನು ತಪ್ಪಾಗಿ ಬರೆದರು. 'ಬೇಟಿ ಬಚಾವೋ, ಬೇಟಿ ಪಢಾವೋ' ಎಂದು ಪೂರ್ಣವಾಗಿ ಬರೆಯಲು ಅವರು ವಿಫಲರಾಗಿದ್ದಾರೆ. 'ಬೇಟಿ' (ಮಗಳು) ಬದಲಿಗೆ 'ಬೇಡಿ ಬಚಾವೋ, ಪಢಾವೋ' ಎಂದು ಬರೆದಿದ್ದಾರೆ. ಇದಾದ ತಕ್ಷಣವೇ ಬರಹವನ್ನು ಅಳಿಸಿ ಹಾಕಲಾಗಿದೆ. ಆದರೆ, ಸಚಿವರು ಘೋಷವಾಕ್ಯವನ್ನು ಸಾರ್ವಜನಿಕವಾಗಿ ತಪ್ಪು ಬರೆದಿರುವ ದೃಶ್ಯಗಳು ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಇದರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.