ನವದೆಹಲಿ: ಉಕ್ರೇನ್‌ನಲ್ಲಿನ ಸುದೀರ್ಘ ಯುದ್ಧ ಮತ್ತು ಅದರಿಂದ ಉಂಟಾಗಿರುವ ಮಾನವೀಯ ಪರಿಣಾಮಗಳ ಬಗ್ಗೆ ಭಾರತ ಮತ್ತು ಜರ್ಮನಿ ಆಳವಾದ ಕಳವಳ ವ್ಯಕ್ತಪಡಿಸಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನಿ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಶುಕ್ರವಾರ ಜಂಟೀ ಹೇಳಿಕೆ ಬಿಡುಗಡೆ ಮಾಡಿ ಅಣ್ವಸ್ತ್ರ ಬಳಕೆ ಅಥವಾ ಬೆದರಿಕೆ ಸರಿಯಾದ ಕ್ರಮವಲ್ಲ ಹಾಗೂ ಸ್ವೀಕಾರಾರ್ಹವಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಸಂಘರ್ಷದ ಸಂದರ್ಭದಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯನ್ನು ಸ್ವೀಕಾರಾರ್ಹವಲ್ಲ ಎಂದು ಸಲಹೆ ನೀಡಿದ್ದಾರೆ.
ಉಭಯ ನಾಯಕರು ಇಲ್ಲಿ ಭಾರತ-ಜರ್ಮನಿ ಅಂತರ-ಸರ್ಕಾರಿ ಸಮಾಲೋಚನೆಯ ಏಳನೇ ಸುತ್ತಿನ ಸಹ -ಅಧ್ಯಕ್ಷತೆ ವಹಿಸಿದ ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಈ ವಿಷಯ ತಿಳಿಸಲಾಗಿದೆ. ಎಲ್ಲಾ ರೀತಿಯ ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದವನ್ನು ನಿಸ್ಸಂದಿಗ್ಧವಾಗಿ ಖಂಡಿಸಿದ್ದಾಗಿ ವಿದೇಶಾಂಗ ಇಲಾಖೆ ನೀಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಉಭಯ ನಾಯಕರು ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ತಮ್ಮ ಆಳವಾದ ಕಳವಳವನ್ನು ವ್ಯಕ್ತಪಡಿಸಿದರು. ಯುದ್ಧದ ಭಯಾನಕ ಮತ್ತು ದುರಂತದ ಮಾನವೀಯ ಪರಿಣಾಮಗಳು ಸೇರಿದಂತೆ ವಿಶ್ವಸಂಸ್ಥೆಯ ಉದ್ದೇಶಗಳು ಮತ್ತು ತತ್ವಗಳಿಗೆ ಅನುಗುಣವಾಗಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತವಾದ ಶಾಂತಿಯ ಅಗತ್ಯವನ್ನು ಪ್ರತಿಪಾದಿಸಿದರು. ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ ನೀಡುವಂತೆ ಅವರು ಇದೇ ವೇಳೆ ರಷ್ಯಾ- ಉಕ್ರೇನ್ಗಳಿಗೆ ಕರೆ ನೀಡಿದರು.
ಜಾಗತಿಕ ಆಹಾರ ಮತ್ತು ಇಂಧನ ಭದ್ರತೆಗೆ ಸಂಬಂಧಿಸಿದಂತೆ ಉಕ್ರೇನ್‌ನಲ್ಲಿನ ಯುದ್ಧದ ಋಣಾತ್ಮಕ ಪರಿಣಾಮಗಳ ಬಗ್ಗೆ ಉಭಯ ನಾಯಕರು ಸಮಾಲೋಚಿಸಿದರು. ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ಮತ್ತು ಕಡಿಮೆ-ಅಭಿವೃದ್ಧಿ ಹೊಂದಿದ ದೇಶಗಳಿಗೆ ಇದರಿಂದ ಭಾರಿ ಹೊಡೆತ ಬಿದ್ದಿದೆ ಎಂಬುದನ್ನು ಇಬ್ಬರೂ ನಾಯಕರು ಒಪ್ಪಿಕೊಂಡರು.
ಭಾರತ- ಜರ್ಮನಿ ಜಂಟಿ ಹೇಳಿಕೆ: ಅಕ್ಟೋಬರ್ 7, 2023 ರಂದು ಹಮಾಸ್ ನಡೆಸಿದ ಭಯೋತ್ಪಾದಕ ದಾಳಿಯನ್ನು ನಿಸ್ಸಂದಿಗ್ಧವಾಗಿ ಖಂಡಿಸಲಾಗಿದೆ. ದೊಡ್ಡ ಪ್ರಮಾಣದ ನಾಗರಿಕರ ಜೀವಹಾನಿಯ ಬಗ್ಗೆಯೂ ಉಭಯ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ಗಾಜಾದಲ್ಲಿ ಉಂಟಾಗಿರುವ ಮಾನವೀಯ ಬಿಕ್ಕಟ್ಟು, ಹಮಾಸ್‌ನಿಂದ ಬಂಧಿಸಲ್ಪಟ್ಟಿರುವ ಎಲ್ಲಾ ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಕ್ರಮ ಕೈಗೊಳ್ಳಬೇಕು ಮತ್ತು ತಕ್ಷಣವೇ ಕದನ ವಿರಾಮ ಘೋಷಣೆ ಆಗಬೇಕು ಹಾಗೂ ಗಾಜಾದಾದ್ಯಂತ ಮಾನವೀಯ ಸಹಾಯಕ್ಕೆ ಧಾವಿಸಬೇಕು ಎಂದು ಇಬ್ಬರೂ ನಾಯಕರು ಕರೆ ನೀಡಿದರು.