ಚೆನ್ನೈ (ತಮಿಳುನಾಡು):ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪುತ್ರ ಹಾಗೂ ಯುವಜನ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಜೊತೆಗೆ ಮೂವರು ಸಚಿವರು ಕೂಡ ಪ್ರತಿಜ್ಞಾವಿಧಿ ಪಡೆದರು.
ರಾಜಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರ್.ಎನ್.ರವಿ ಅವರು ಉದಯನಿಧಿ ಅವರಿಗೆ ಉಪ ಮುಖ್ಯಮಂತ್ರಿಯಾಗಿ, ಸೆಂಥಿಲ್ ಬಾಲಾಜಿ, ಡಾ.ಗೋವಿ ಚೆಲಿಯನ್, ಆರ್.ರಾಜೇಂದ್ರನ್ ಮತ್ತು ಎಸ್.ಎಂ.ನಾಜರ್ ಅವರಿಗೆ ಸಚಿವರಾಗಿ ಪ್ರಮಾಣ ವಚನ ಬೋಧಿಸಿದರು. ಈ ವೇಳೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಡಿಎಂಕೆ ಪಕ್ಷದ ಮುಖಂಡರು ಮತ್ತು ಮಿತ್ರಪಕ್ಷದ ಮುಖಂಡರು ಭಾಗವಹಿಸಿದ್ದರು.
ಇದಕ್ಕೂ ಮುನ್ನ ಮಾಜಿ ಸಿಎಂ ದಿವಂಗತ ನಾಯಕ ಎಂ.ಕರುಣಾನಿಧಿ ಅವರ ಸ್ಮಾರಕಕ್ಕೆ ತೆರಳಿದ ಉದಯನಿಧಿ ಸ್ಟಾಲಿನ್ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಹಾಗೂ ಸಚಿವರು ತಮಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅವರ ನಂಬಿಕೆ ಉಳಿಸಿಕೊಳ್ಳಲು ಶ್ರಮಿಸುವೆ ಎಂದರು.
ತಮ್ಮ ವಿರುದ್ಧದ ಟೀಕೆಗಳ ಕುರಿತು ಪ್ರತಿಕ್ರಿಯಿಸಿ, ರಾಜಕೀಯದಲ್ಲಿ ಟೀಕೆಗಳು ಇದ್ದೇ ಇರುತ್ತವೆ. ಆದರೆ, ಅವೆಲ್ಲವನ್ನೂ ಮೆಟ್ಟಿನಿಂತು ಕೈಲಾದಷ್ಟು ಜನರಿಗೆ ಒಳ್ಳೆಯದನ್ನು ಮಾಡುತ್ತೇನೆ. ಟೀಕೆಗಳಿಗೆ ನನ್ನ ಕೆಲಸದಿಂದಲೇ ಉತ್ತರ ನೀಡುವೆ ಎಂದರು.