ಗುವಾಹಟಿ/ಡೆಹರಾಡೂನ್:ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಹಾಗೂ ಅಸ್ಸೋಂ ಕೂಡ ರಾಜ್ಯದ ಚಾರ್ ಪ್ರದೇಶದಲ್ಲಿ ವಾಸಿಸುವ ಅಲ್ಪಸಂಖ್ಯಾತರಲ್ಲಿ ಬಹುಪತ್ನಿತ್ವ ನಿಷೇಧಿಸಲು ಕಾನೂನನ್ನು ಜಾರಿಗೊಳಿಸುವ ಸಾಧ್ಯತೆಯಿದೆ. ಉತ್ತರಾಖಂಡದಂತೆಯೇ, 14.07 ಲಕ್ಷ (13.95 ಪ್ರತಿಶತ) ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಉತ್ತರದ ರಾಜ್ಯ. 1.07 ಕೋಟಿ (34.22 ಪ್ರತಿಶತ) ಅಲ್ಪಸಂಖ್ಯಾತರ ಜನಸಂಖ್ಯೆಯನ್ನು ಅಸ್ಸೋಂ ಹೊಂದಿದೆ. ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದೆ.
ಬಿಜೆಪಿಯು ಏಕರೂಪ ನಾಗರಿಕ ಸಂಹಿತೆಯನ್ನು ರಾಜಕೀಯ ಚರ್ಚೆಯ ಭಾಗವಾಗಿ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಯುಸಿಸಿಗಾಗಿ (ಏಕರೂಪ ನಾಗರಿಕ ಸಂಹಿತೆ) ವಿಷಯವನ್ನು ಆಗಾಗ್ಗೆ ಎತ್ತುತ್ತಿದ್ದಾರೆ. ಇದು ದೀರ್ಘಕಾಲದವರೆಗೆ ಬಿಜೆಪಿಯ ನಿಲುವಿನ ಭಾಗವಾಗಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಉತ್ತರಾಖಂಡ ಕ್ಯಾಬಿನೆಟ್ ಸರ್ಕಾರವು ನೇಮಿಸಿದ ಉನ್ನತ ಮಟ್ಟದ ಸಮಿತಿಯು ಮಾಡಿದ ಶಿಫಾರಸುಗಳ ಮೇಲೆ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ಭಾನುವಾರ ಅಂಗೀಕರಿಸಿದೆ. ಇಂದು ಈ ಮಸೂದೆ ಸದನದಲ್ಲಿ ಅಂಗೀಕಾರ ಆಗಲಿದೆ.
ಒಮ್ಮೆ ಕಾರ್ಯಗತಗೊಂಡ ನಂತರ, ಉತ್ತರಾಖಂಡವು ಸ್ವಾತಂತ್ರ್ಯದ ನಂತರ ಏಕರೂಪ ನಾಗರಿಕ ಸಂಹಿತೆ ಅಳವಡಿಸಿಕೊಂಡ ದೇಶದ ಮೊದಲ ರಾಜ್ಯವಾಗಲಿದೆ. ಏಕರೂಪ ನಾಗರಿಕ ಸಂಹಿತೆಯು ಪೋರ್ಚುಗೀಸ್ ಆಳ್ವಿಕೆಯ ದಿನಗಳಿಂದಲೂ ಗೋವಾದಲ್ಲಿ ಕಾರ್ಯನಿರ್ವಹಿಸುತ್ತಿದೆ. ನಾಗರಿಕ ಕಾನೂನುಗಳಲ್ಲಿ ಏಕರೂಪತೆಯನ್ನು ತರುವ ಗುರಿಯನ್ನು ಹೊಂದಿರುವ ಮಸೂದೆಯನ್ನು ಇದೀಗ ಉತ್ತರಾಖಂಡ ವಿಧಾನಸಭೆಯಲ್ಲಿ ಇಂದು ಮಂಡನೆಯಾಗಲಿದೆ.
ಅಸ್ಸೋಂ ಮುಖ್ಯಮಂತ್ರಿ ಪ್ರತಿಕ್ರಿಯೆ:ಈ ಮಧ್ಯೆಯೇ, ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಉತ್ತರಾಖಂಡದಲ್ಲಿ ಮಸೂದೆ ಜಾರಿಗೊಳಿಸಿದ ನಂತರ ಅಸ್ಸೋಂನಲ್ಲಿ ಯುಸಿಸಿಯನ್ನು ಜಾರಿಗೆ ತರಲಾಗುವುದು ಎಂದು ಒತ್ತಿ ಹೇಳಿದ್ದಾರೆ. ತಮ್ಮ ಸರ್ಕಾರವು ಉತ್ತರಾಖಂಡ ಯುಸಿಸಿ ವರದಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಸೋಮವಾರದಂದು ಆರಂಭಗೊಂಡ ಬಜೆಟ್ ಅಧಿವೇಶನದಲ್ಲಿ ರಾಜ್ಯದಲ್ಲಿ ಬಹುಪತ್ನಿತ್ವವನ್ನು ನಿಷೇಧಿಸುವ ಬಗ್ಗೆ ತನ್ನ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದೂ ಶರ್ಮಾ ಶುಕ್ರವಾರ ತಿಳಿಸಿದ್ದಾರೆ.
"ನಾವು ಅಸ್ಸೋಂನಲ್ಲಿ ಬಹುಪತ್ನಿತ್ವ ನಿಷೇಧ ಕಾಯಿದೆ ಜಾರಿಗೆ ತರಲು ನಿಯಮಗಳನ್ನ ರೂಪಿಸುತ್ತಿದ್ದೇವೆ. ನಾವು ಉತ್ತರಾಖಂಡದ ಬೆಳವಣಿಗೆಗಳನ್ನೂ ಸಹ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಉತ್ತರಾಖಂಡ ಯುಸಿಸಿ ಮಸೂದೆಯನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದರೆ, ನಾವು ಸಂಪೂರ್ಣ ಯುಸಿಸಿಯನ್ನು ಜಾರಿಗೆ ತರಲು ಸಾಧ್ಯವೇ? ಅದನ್ನೂ ನೋಡುತ್ತೇವೆ. ಫೆಬ್ರವರಿ 12 ರಂದು ನಮ್ಮ ವಿಧಾನಸಭೆ ಶುರುವಾಗಲಿದೆ. ಇದರಿಂದ ನಮಗೆ ಸ್ವಲ್ಪ ಸಮಯವಿದೆ'' ಎಂದು ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಎಐಯುಡಿಎಫ್ ಶಾಸಕ ವಾಗ್ದಾಳಿ: ಅಸ್ಸೋಂ ಸಿಎಂ ಹೇಳಿಕೆಯ ನಂತರ, ಎಐಯುಡಿಎಫ್ ಶಾಸಕ ರಫೀಕುಲ್ ಇಸ್ಲಾಂ, ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ''ಬಿಜೆಪಿಯು ಯುಸಿಸಿಯನ್ನು ಸಂಪೂರ್ಣವಾಗಿ ಜಾರಿಗೆ ತರಲು ಧೈರ್ಯ ಮಾಡುವುದಿಲ್ಲ'' ಎಂದು ಹೇಳಿದ್ದಾರೆ.
ಅಸ್ಸೋಂ ತಜ್ಞರ ಸಮಿತಿಯು ಬಹುಪತ್ನಿತ್ವ ನಿಷೇಧಿಸುವ ಕುರಿತು ತನ್ನ ವರದಿಯನ್ನು ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಸಲ್ಲಿಕೆ ಮಾಡಿತ್ತು. ಬಹುಪತ್ನಿತ್ವವನ್ನು ಕೊನೆಗೊಳಿಸಲು ಕಾನೂನನ್ನು ಜಾರಿಗೊಳಿಸಲು ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ.