ಅಯೋಧ್ಯೆ (ಉತ್ತರ ಪ್ರದೇಶ):ಅಯೋಧ್ಯೆಯ ರಾಮ ಮಂದಿರಕ್ಕೆ ಆಗಮಿಸಿದ್ದ ಹರಿಯಾಣದ ಇಬ್ಬರು ವೃದ್ಧ ಭಕ್ತರು ಸೋಮವಾರ ನಿಧನರಾಗಿರುವುದಾಗಿ ತಿಳಿದು ಬಂದಿದೆ. ''ರಾಮಲಲ್ಲಾ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ 60 ವರ್ಷದ ಮಹಿಳೆ ಮತ್ತು ವೃದ್ಧರೊಬ್ಬರಿಗೆ ಉಸಿರಾಟದ ತೊಂದರೆ ಉಂಟಾಗಿದ್ದರಿಂದ ಅವರು ಸರದಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದರು. ಇಬ್ಬರನ್ನೂ ತಕ್ಷಣ ಶ್ರೀರಾಮ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು'' ಎಂದು ಅಲ್ಲಿನ ಪೊಲೀಸರು ಖಚಿತಪಡಿಸಿದ್ದಾರೆ.
ಕಾಲ್ತುಳಿತದಿಂದ ಈ ಸಾವು ಸಂಭವಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಹರಿದಾಡುತ್ತಿದೆಯಾದರೂ ಪೊಲೀಸರು ಈ ವದಂತಿಯನ್ನು ತಳ್ಳಿ ಹಾಕಿದ್ದಾರೆ.
''ರಾಮ ಮಂದಿರಕ್ಕೆ ಭೇಟಿ ನೀಡಲು ಸಾಲಿನಲ್ಲಿ ಕಾಯುತ್ತಿದ್ದಾಗ ಇಬ್ಬರೂ ಮೂರ್ಛೆ ಹೋಗಿದ್ದು, ಅವರನ್ನು ತಕ್ಷಣ ಶ್ರೀರಾಮ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಷ್ಟರಲ್ಲಾಗದೇ ಎಲ್ಲವೂ ಕೈಮೀರಿತ್ತು. ಮೃತರಿಬ್ಬರೂ 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಸಾವಿಗೆ ನಿಖರವಾದ ಕಾರಣ ಕೂಡ ತಿಳಿದು ಬಂದಿಲ್ಲ. ಆದರೆ, ಅವರು ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ವೈದ್ಯರು ಅನುಮಾನ ವ್ಯಕ್ತಪಡಿಸಿರುವುದಾಗಿ'' ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀರಾಮ್ ಆಸ್ಪತ್ರೆಯ ಆಡಳಿತ ಅಧಿಕಾರಿ ವೈ.ಪಿ. ಸಿಂಗ್ ಮಾತನಾಡಿ, ''ಬೆಳಗ್ಗೆ 11 ಗಂಟೆಗೆ ಮೃತ ಸ್ಥಿತಿಯಲ್ಲಿ ಮಹಿಳೆಯೊಬ್ಬರನ್ನು ಆಸ್ಪತ್ರೆಗೆ ತರಲಾಯಿತು. ಆಕೆಯನ್ನು ಹರಿಯಾಣದ ಸೋನಿಪತ್ ನಿವಾಸಿ ಬಿಮ್ಲಾ ದೇವಿ (60) ಎಂದು ಗುರುತಿಸಲಾಗಿದೆ. ಅದೇ ಸಮಯದಲ್ಲಿ, 65 ವರ್ಷದ ಮತ್ತೊಬ್ಬನ ಅನಾಥ ವ್ಯಕ್ತಿಯ ಶವವನ್ನು ಸಹ ತರಲಾಯಿತು. ಇಬ್ಬರೂ ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ಇದೆ'' ಎಂದು ತಿಳಿಸಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ಮುಗಿಸಿಕೊಂಡು ಭಕ್ತರು ನೇರವಾಗಿ ಅಯೋಧ್ಯೆಯತ್ತ ಆಗಮಿಸುತ್ತಿರುವುದರಿಂದ ಹನುಮಾನ್ ಗರ್ಹಿ ಮತ್ತು ರಾಮ ದೇವಾಲಯಕ್ಕೆ ಹೋಗುವ ಎಲ್ಲಾ ರಸ್ತೆಗಳು ಜನದಟ್ಟಣೆಯಿಂದ ಮುಚ್ಚಿಹೋಗಿವೆ. ಸೋಮವಾರ ಅಯೋಧ್ಯೆಯಲ್ಲಿ ಭಕ್ತರ ದಂಡೇ ಇದ್ದುದರಿಂದ ಕುಂಭಮೇಳದಂತಹ ದೃಶ್ಯ ಕಂಡು ಬಂದಿತು. 10 ಲಕ್ಷಕ್ಕೂ ಹೆಚ್ಚು ಭಕ್ತರು ಏಕಕಾಲದಲ್ಲಿ ಬಂದಿದ್ದರಿಂದ ಎಲ್ಲಾ ರಸ್ತೆಗಳು ಮತ್ತು ಬೀದಿಗಳು ಭಕ್ತರ ಸಂಚಾರದಿಂದ ತುಂಬಿದ್ದವು. ಭಕ್ತರನ್ನು ಕಂಡು ಹನುಮಾನಗಿರಿ ದೇವಸ್ಥಾನದಲ್ಲಿ ಬೆಳಗ್ಗೆ 4:00 ಗಂಟೆಯಿಂದಲೇ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಮಲಲ್ಲಾ ದರ್ಶನ ಪಡೆಯಲು ಎರಡು ಕಿಲೋಮೀಟರ್ ಉದ್ದದ ಸರತಿ ಸಾಲು ಇತ್ತು.
''ರಾಮನಗರಿ ಅಯೋಧ್ಯೆಯಲ್ಲಿ ಅದೆಷ್ಟು ಜನಸಂದಣಿ ಇತ್ತೆಂದರೆ, ನಯಾ ಘಾಟ್‌ನಿಂದ ತೀರಿ ಬಜಾರ್‌ವರೆಗೆ, ರಾಮಪಥಕ್ಕೆ ಸಂಪರ್ಕಿಸುವ ಎಲ್ಲಾ ಬೀದಿಗಳಲ್ಲಿ ಜನಸಂದಣಿಯಿಂದ ಭರ್ತಿಯಾಗಿದ್ದವು. ನನ್ನ ಜೀವನದಲ್ಲಿ ಮೊದಲ ಬಾರಿಗೆ ಈ ಪ್ರಮಾಣದ ಜನಸಂದಣಿ ನೋಡಿದೆ. ಮೌನಿ ಅಮವಾಸ್ಯೆಯಂದು ಇದಕ್ಕೂ ಹೆಚ್ಚಿನ ಜನಸಂದಣಿ ಸೇರುವ ಸಾಧ್ಯತೆಯಿದೆ. ಮಹಾ ಕುಂಭ ಮೇಳದಲ್ಲಿ ಸ್ನಾನ ಮಾಡಿ ಹೆಚ್ಚಿನ ಸಂಖ್ಯೆಯ ಜನರು ಬರುತ್ತಿರುವುದಾಗಿ'' ಭಕ್ತ ರಾಮ್ ಚೇತ್ ವರ್ಮಾ ಎಂಬುವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಜನವರಿ 29 ರಂದು ಮೌನಿ ಅಮಾವಾಸ್ಯೆ ಇದ್ದು, ಅಮೃತ ಸ್ನಾನದ ನಂತರ ಭಾರೀ ಜನಸಮೂಹ ಸೇರುವ ನಿರೀಕ್ಷೆಯಿದೆ. ಹೆಚ್ಚುತ್ತಿರುವ ಜನಸಂದಣಿಯನ್ನು ನಿರ್ವಹಿಸಲು ಮತ್ತು ಭಕ್ತರಿಗೆ ಸ್ಥಳಾವಕಾಶ ಕಲ್ಪಿಸಲು ಹಾಗೂ ಶೀತ ವಾತಾವರಣದಲ್ಲಿ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವ್ಯವಸ್ಥೆಗಳನ್ನು ಮಾಡಲಾಗಿದೆ. ಮಹಾಕುಂಭಕ್ಕೆ ಬರುವ ಭಕ್ತರು ನಂತರ ದರ್ಶನಕ್ಕಾಗಿ ಅಯೋಧ್ಯೆಯ ದೇವಾಲಯವನ್ನು ತಲುಪುತ್ತಿದ್ದಾರೆ. ವಿಶೇಷವಾಗಿ ಪವಿತ್ರ ಸ್ನಾನದ ನಂತರ, ಇಲ್ಲಿ ಭಾರೀ ಜನಸಂದಣಿ ಕಂಡುಬರುತ್ತದೆ. ಜನವರಿ 29ರ ಮೌನಿ ಅಮಾವಾಸ್ಯೆಯಂದು ಅಮೃತ ಸ್ನಾನದ ನಂತರ ಭಾರೀ ಜನಸಂದಣಿಯನ್ನು ನಿರೀಕ್ಷಿಸಲಾಗಿದೆ ಎಂದು ಅಯೋಧ್ಯೆಯ ಆಯುಕ್ತ ಗೌರವ್ ದಯಾಳ್ ಹೇಳಿದ್ದಾರೆ.
ಇದನ್ನೂ ಓದಿ:ಮಹಾ ಕುಂಭಮೇಳದಲ್ಲಿ ಸನ್ಯಾಸತ್ವ ಸ್ವೀಕರಿಸಿದ ಬಾಲಿವುಡ್ ನಟಿ ಮಮತಾ ಕುಲಕರ್ಣಿ - MAMTA KULKARNI BECOMES HINDU MONK