ರಾಜಗಢ, ಮಧ್ಯಪ್ರದೇಶ: ಮದುವೆ ಮೆರವಣಿಗೆಯಲ್ಲಿ ಜನರನ್ನು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ 3 ಮಕ್ಕಳು ಸೇರಿ 13 ಮಂದಿ ಮೃತಪಟ್ಟಿರುವ ಘಟನೆ ರಾಜ್‌ಗಢದ ಪಿಪ್ಲೋಡಿಯದಲ್ಲಿ ಭಾನುವಾರ ರಾತ್ರಿ 9 ಗಂಟೆ ನಡೆದಿದೆ. ಘಟನೆಯಲ್ಲಿ 16 ಮಂದಿ ಗಾಯಗೊಂಡಿದ್ದಾರೆ.
ಅಪಘಾತದ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಾಜಸ್ಥಾನದ ಮೋತಿಪುರದಿಂದ ಕುಲಂಪುರಕ್ಕೆ ಮದುವೆ ಮೆರವಣಿಗೆ ಸಾಗುತ್ತಿತ್ತು ಎಂಬ ಮಾಹಿತಿ ದೊರಕಿದೆ. ಘಟನೆಗೆ ಸಿಎಂ ಮೋಹನ್ ಯಾದವ್ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಾಪ ಸೂಚಿಸಿದ್ದಾರೆ.
ಸಿಎಂ ಮೋಹನ್ ಯಾದವ್ ಟ್ವೀಟ್:"ರಾಜ್‌ಗಢ ಜಿಲ್ಲೆಯ ಪೀಪ್ಲೋಡಿಯ ರಸ್ತೆಯಲ್ಲಿ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ ರಾಜಸ್ಥಾನದ ಜಲಾವರ್ ಜಿಲ್ಲೆಯ 13 ಜನರು ಸಾವನ್ನಪ್ಪಿರುವ ಸುದ್ದಿ ಅತ್ಯಂತ ದುಃಖಕರ ವಿಷಯವಾಗಿದೆ. ಸಚಿವ ಶ್ರೀನಾರಾಯಣ ಸಿಂಗ್ ಪನ್ವಾರ್, ಜಿಲ್ಲಾಧಿಕಾರಿ ಹಾಗೂ ರಾಜಗಢ್ ಎಸ್ಪಿ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ನಾವು ರಾಜಸ್ಥಾನ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ರಾಜಸ್ಥಾನ ಪೊಲೀಸರು ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಜ್‌ಗಢ್‌ನ ಜಿಲ್ಲಾ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಕೆಲ ರೋಗಿಗಳನ್ನು ಭೋಪಾಲ್‌ಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ. ಅಗಲಿದ ಕುಟುಂಬಕ್ಕೆ ನನ್ನ ಆಳವಾದ ಸಂತಾಪ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದಾರೆ.