ಭೋಪಾಲ್(ಮಧ್ಯ ಪ್ರದೇಶ): ಇಲ್ಲಿ ಕಳೆದ 40 ವರ್ಷಗಳ ಹಿಂದೆ ನಡೆದ ಭಯಾನಕ ಅನಿಲ ದುರಂತದ ಬಳಿಕ ಯೂನಿಯನ್ ಕಾರ್ಬೈಡ್ ಫ್ಯಾಕ್ಟರಿಯಲ್ಲಿದ್ದ 377 ಟನ್ಗಳಷ್ಟು ಅಪಾಯಕಾರಿ ತ್ಯಾಜ್ಯವನ್ನು ನಾಶಪಡಿಸಲು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಾಯಕಾರಿ ತ್ಯಾಜ್ಯವನ್ನು 12 ಸೀಲ್ಡ್ ಕಂಟೈನರ್ ಟ್ರಕ್ನಲ್ಲಿ ಬುಧವಾರ ರಾತ್ರಿ ಭೋಪಾಲ್ನಿಂದ 250 ಕಿ.ಮೀ ದೂರದ ಧರ್ ಜಿಲ್ಲೆಯ ಪಿತಾಂಪುರ್ ಕೈಗಾರಿಕಾ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ರಾತ್ರಿ 9 ಗಂಟೆಯಿಂದ ಕಂಟೈನರ್ ಟ್ರಕ್ಗಳು ತಡೆರಹಿತವಾಗಿ ಪ್ರಯಾಣ ಬೆಳೆಸಿದವು. ಸುಮಾರು ಏಳು ಗಂಟೆಯ ಪ್ರಯಾಣಕ್ಕೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ಭೋಪಾಲ್ ಅನಿಲ ದುರಂತ ಪರಿಹಾರ ಮತ್ತು ಪುನರ್ವಸತಿ ವಿಭಾಗದ ನಿರ್ದೇಶಕ ಸ್ವತಂತ್ರ ಕುಮಾರ್ ಸಿಂಗ್ ಮಾಹಿತಿ ನೀಡಿದರು.
ಸುಮಾರು 100 ಮಂದಿ 30 ನಿಮಿಷದ ಪಾಳಿಯಂತೆ ಭಾನುವಾರ ಕೆಲಸ ಮಾಡಿ ಈ ತ್ಯಾಜ್ಯವನ್ನು ಟ್ರಕ್ಗೆ ತುಂಬಿದರು. ಈ ಕೆಲಸದಲ್ಲಿ ನಿರತರಾದ ಕಾರ್ಮಿಕರಿಗೆ ಪ್ರತೀ 30 ನಿಮಿಷಕ್ಕೆ ಒಮ್ಮೆ ವಿಶ್ರಾಂತಿ ನೀಡಲಾಗುತ್ತಿದ್ದು ಮತ್ತು ಅವರನ್ನು ಆರೋಗ್ಯ ತಪಾಸಣೆಗೆ ಒಳಗಾಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
5,479 ಮಂದಿ ಸಾವು-ಭಾರತದ ಇತಿಹಾಸದಲ್ಲಿ ಕರಾಳ ದಿನ!: 1984ರ ಡಿಸೆಂಬರ್ 2-3ರ ರಾತ್ರಿ ಯೂನಿಯನ್ ಕಾರ್ಬೈಡ್ ರಾಸಾಯನಿಕ ಕಾರ್ಖಾನೆಯಲ್ಲಿ ಅತ್ಯಂತ ಅಪಾಯಕಾರಿಯಾದ ಮಿಥೇಲ್ ಐಸೋಸೈನೆಟ್ (ಎಂಐಸಿ) ಅನಿಲ ಸೋರಿಕೆಯಾದ ಪರಿಣಾಮ 5,479 ಮಂದಿ ಸಾವನ್ನಪ್ಪಿದ್ದು, ಸಾವಿರಾರು ಮಂದಿ ದೀರ್ಘಕಾಲದ ಅನಾರೋಗ್ಯಕ್ಕೆ ಒಳಗಾದರು. ಇದನ್ನು ಜಗತ್ತಿನ ಅತೀ ಕೆಟ್ಟ ಕೈಗಾರಿಕಾ ದುರಂತಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಕೋರ್ಟ್ ಎಚ್ಚರಿಕೆ ನೀಡಿದ ಬಳಿಕ ಕ್ರಮ: ಸುಪ್ರೀಂ ಕೋರ್ಟ್ ನಿರ್ದೇಶನದ ಹೊರತಾಗಿಯೂ ಯೂನಿಯನ್ ಕಾರ್ಬೈಡ್ ಫ್ಯಾಕ್ಟರಿಯಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ಡಿಸೆಂಬರ್ 3ರಂದು ಮಧ್ಯ ಪ್ರದೇಶದ ಹೈಕೋರ್ಟ್ ಅಧಿಕಾರಿಗಳಿಗೆ ಛೀಮಾರಿ ಹಾಕಿ, ತ್ಯಾಜ್ಯ ವಿಲೇವಾರಿಗೆ ನಾಲ್ಕು ವಾರಗಳ ಗಡುವು ನೀಡಿತ್ತು. ಈ ಆದೇಶವನ್ನೂ ಪಾಲಿಸದೇ ಹೋದಲ್ಲಿ ಇದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಕೂಡಾ ಎಚ್ಚರಿಕೆ ನೀಡಿತ್ತು.