ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಹರಿಯಾಣ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಸೋಮವಾರ ಅಲ್ಲಲ್ಲಿ ತುಂತುರು ಮಳೆ, ಗುಡುಗು ಸಹಿತ ಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ದೆಹಲಿಯಲ್ಲಿ ಸೋಮವಾರ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಮಂಗಳವಾರದಿಂದ ಗುರುವಾರದವರೆಗೆ ಭಾರಿ ಪ್ರಮಾಣದ ಮಳೆಯ ಮುನ್ಸೂಚನೆ ಇಲ್ಲವಾದರೂ, ಭಾರಿ ಗಾಳಿಯೊಂದಿಗೆ ಆಕಾಶವು ಭಾಗಶಃ ಮೋಡ ಕವಿದ ವಾತಾವರಣದಿಂದ ಕೂಡಿರುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾನುವಾರದಂದು ದೆಹಲಿಯ ಗರಿಷ್ಠ ತಾಪಮಾನವು 32.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಏಪ್ರಿಲ್ 11 ರಂದು ದಾಖಲಾದ 39.1 ಡಿಗ್ರಿ ಸೆಲ್ಸಿಯಸ್‌ಗೆ ಹೋಲಿಸಿದರೆ 7 ಡಿಗ್ರಿ ಸೆಲ್ಸಿಯಸ್ ಕುಸಿತ ಕಂಡಿದೆ. ಶನಿವಾರ ಮತ್ತು ಭಾನುವಾರ ಅಲ್ಲಲ್ಲಿ ಮಳೆಯಾದ ಪರಿಣಾಮ ಮಾಲಿನ್ಯ ಪ್ರಮಾಣ ಕೂಡ ತಗ್ಗಿದೆ. ಇಂದು ಜೋರಾದ ಗಾಳಿ ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ. ಇದರೊಂದಿಗೆ ಗಾಳಿಯಲ್ಲಿನ ಆರ್ದ್ರತೆಯ ಮಟ್ಟವು 66 ಪ್ರತಿಶತದವರೆಗೆ ಮತ್ತು ಪ್ರತಿ ಗಂಟೆಗೆ 10 ರಿಂದ 15 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಇದಕ್ಕಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ತನ್ನ ಬೆಳಗಿನ ಬುಲೆಟಿನ್‌ನಲ್ಲಿ ಈಶಾನ್ಯ ರಾಜಸ್ಥಾನದ ಮೇಲೆ ಚಂಡಮಾರುತದ ಪರಿಚಲನೆ ಇರುವುದಾಗಿ ಹೇಳಿರುವ ಹವಾಮಾನ ಇಲಾಖೆ, ದಕ್ಷಿಣ ಬಿಹಾರ, ಉತ್ತರ ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ದಕ್ಷಿಣ ಭಾಗದ ಮೂಲಕ ಗಂಗಾನದಿಯ ಪಶ್ಚಿಮ ಬಂಗಾಳದ ಕಡೆಗೆ ತೆರಳುವ ಸಾಧ್ಯತೆ ಇದೆ. ಪರಿಣಾಮ ಕೆಲವು ಪ್ರದೇಶಗಳಲ್ಲಿ ಗುಡುಗು, ಮಿಂಚು ಮತ್ತು ಬಲವಾದ ಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಏಪ್ರಿಲ್ 18 ರಿಂದ ವಾಯವ್ಯ ಭಾರತದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಈ ನಡುವೆ ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಕಾಶ್ಮೀರ, ಮುಜಫರಾಬಾದ್, ಲಡಾಖ್, ಬಾಲ್ಟಿಸ್ತಾನ್ ಮತ್ತು ಗಿಲ್ಗಿಟ್ ಸೇರಿದಂತೆ ಇತರ ಭಾಗಗಳಲ್ಲಿ ಮಿಂಚು, ಗುಡುಗು ಮತ್ತು ಬಿರುಗಾಳಿ ಸಹಿತ ವ್ಯಾಪಕವಾದ ಮಳೆ/ಹಿಮಪಾತವು ಸಂಭವಿಸಬಹದು ಎಂದು ಇಲಾಖೆ ಮಾಹಿತಿ ನೀಡಿದೆ.