ಕರ್ನಾಟಕ

karnataka

ETV Bharat / bharat

ಗಣರಾಜ್ಯೋತ್ಸವ 2025: ದೆಹಲಿಯ ಕರ್ತವ್ಯ ಪಥದಲ್ಲಿ ಮಿಲಿಟರಿ ಶಕ್ತಿ, ಸಾಂಸ್ಕೃತಿಕ ಶ್ರೀಮಂತಿಕೆ ಪ್ರದರ್ಶನ - REPUBLIC DAY IN DELHI

ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ಗಣರಾಜೋತ್ಸವ ಪರೇಡ್‌ನಲ್ಲಿ ದೇಶದ ಮಿಲಿಟರಿ ಶಕ್ತಿ ಜೊತೆಗೆ ಭವ್ಯ ಪರಂಪರೆ, ಸಂಸ್ಕೃತಿ ಅನಾವರಣಗೊಳ್ಳಲಿದೆ.

KARTAVYA PATH
ಕರ್ತವ್ಯ ಪಥ (IANS)

By PTI

Published : Jan 26, 2025, 8:11 AM IST

ನವದೆಹಲಿ: ದೇಶದೆಲ್ಲೆಡೆ 76ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಇಂದು ದೆಹಲಿಯ ಕರ್ತವ್ಯ ಪಥದಲ್ಲಿ ಪಥ ಸಂಚಲನ ನಡೆಯಲಿದೆ. ಗಣರಾಜೋತ್ಸವ ಪರೇಡ್‌ನಲ್ಲಿ ದೇಶದ ಮಿಲಿಟರಿ ಶಕ್ತಿ ಜೊತೆಗೆ ಭವ್ಯ ಪರಂಪರೆ, ಸಂಸ್ಕೃತಿ ಅನಾವರಣಗೊಳ್ಳಲಿದೆ.

ಈ ಬಾರಿಯ ಪರೇಡ್‌ನಲ್ಲಿ ಬ್ರಹ್ಮೋಸ್, ಪಿನಾಕ್ ಮತ್ತು ಆಕಾಶ್‌ನಂತಹ ಆಧುನಿಕ ರಕ್ಷಣಾ ವ್ಯವಸ್ಥೆಗಳು ಮತ್ತು ಸೇನೆಯ ಹೊಸ ಯುದ್ಧ ಕಣ್ಗಾವಲು ವ್ಯವಸ್ಥೆ ಸಂಜಯ್ ಅನ್ನು ಮೊದಲ ಬಾರಿಗೆ ಪ್ರಸ್ತುತಪಡಿಸಲಾಗುತ್ತದೆ. ಇದಲ್ಲದೆ, ಡಿಆರ್‌ಡಿಒದ ಮೇಲ್ಮೈಯಿಂದ ಮೇಲ್ಮೈಗೆ ಕಾರ್ಯತಂತ್ರದ ಕ್ಷಿಪಣಿ ಪ್ರಳಯ್​ ಸಹ ಮೆರವಣಿಗೆಯ ಭಾಗವಾಗಲಿದೆ.

ಟಿ-90 ಭೀಷ್ಮ ಟ್ಯಾಂಕ್, ಶರತ್ ಬಿಎಂಪಿ-2, ಶಾರ್ಟ್ ಸ್ಪ್ಯಾನ್ ಬ್ರಿಡ್ಜಿಂಗ್ ಸಿಸ್ಟಮ್, ನಾಗ್ ಕ್ಷಿಪಣಿ ವ್ಯವಸ್ಥೆ ಮತ್ತು ಮಲ್ಟಿ-ಬ್ಯಾರೆಲ್ ರಾಕೆಟ್ ಲಾಂಚರ್ ಅಗ್ನಿಬಾನ್‌ನಂತಹ ಉಪಕರಣಗಳು ಭಾರತದ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸಲಿವೆ.ಇನ್ನು ಭಾರತೀಯ ವಾಯುಪಡೆಯ 40 ವಿಮಾನಗಳು ಮತ್ತು ಭಾರತೀಯ ಕೋಸ್ಟ್ ಗಾರ್ಡ್‌ನ ಮೂರು ಡಾರ್ನಿಯರ್ ವಿಮಾನಗಳು ಫ್ಲೈಪಾಸ್ಟ್‌ನಲ್ಲಿ ಭಾಗವಹಿಸಲಿವೆ.

ಬೆಳಗ್ಗೆ 9.30ಕ್ಕೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸುವುದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಗಣರಾಜ್ಯೋತ್ಸವಕ್ಕೆ ಚಾಲನೆ ದೊರೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಳಗ್ಗೆ 10.30ಕ್ಕೆ ಧ್ವಜಾರೋಹಣ ನೆರವೇರಿಸಲಿದ್ದಾರೆ

ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಭಾಗವಹಿಸಲಿದ್ದಾರೆ. ಜೊತೆಗೆ ವಿವಿಧ ಕ್ಷೇತ್ರಗಳ ಸುಮಾರು 10 ಸಾವಿರ ವಿಶೇಷ ಅತಿಥಿಗಳನ್ನು ಪರೇಡ್‌ ವೀಕ್ಷಣೆಗೆ ಆಹ್ವಾನಿಸಲಾಗಿದೆ. ವಿಶೇಷವೆಂದ್ರೆ ಕರ್ತವ್ಯ ಪಥದಲ್ಲಿ ನಡೆಯುವ ಸಾಂಪ್ರದಾಯಿಕ ಪರೇಡ್‌ನಲ್ಲಿ ಇಂಡೋನೇಷ್ಯಾದ ಸೇನಾ ತುಕಡಿಗಳೂ ಪಾಲ್ಗೊಳ್ಳಲಿವೆ.

ರಾಜಧಾನಿಯಲ್ಲಿ ಕಟ್ಟೆಚ್ಚರ:ಗಣರಾಜ್ಯೋತ್ಸವ ಹಿನ್ನೆಲೆ ರಾಜಧಾನಿಯಾದ್ಯಂತ ಅರೆಸೇನಾ ಪಡೆ ಸಿಬ್ಬಂದಿ ಮತ್ತು 70 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನವದೆಹಲಿ ಜಿಲ್ಲೆಯೊಂದರಲ್ಲೇ 15 ಸಾವಿರ ಭದ್ರತಾ ಸಿಬ್ಬಂದಿಯನ್ನು ಒಳಗೊಂಡ ಆರು ಹಂತದ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ. ಸುಮಾರು 2,500 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ವೈಮಾನಿಕ ದಾಳಿಗಳನ್ನು ಪತ್ತೆಹಚ್ಚಲು ಮತ್ತು ಎದುರಿಸಲು ಡ್ರೋನ್ ನಿರೋಧಕ ವ್ಯವಸ್ಥೆ, ಪೆರೇಡ್ ಮಾರ್ಗದಲ್ಲಿ ಸ್ನೈಪರ್​ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಗಣರಾಜ್ಯೋತ್ಸವ ಹಿನ್ನೆಲೆ ರಾಜ್ಯ ಮತ್ತು ಕೇಂದ್ರ ಭದ್ರತಾ ಪಡೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಕರ್ತವ್ಯ ಪಥದಲ್ಲಿ ಸುಮಾರು 15 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪರೇಡ್ ನಡೆಯುವ ನವದೆಹಲಿ, ಮಧ್ಯ ದೆಹಲಿ ಮತ್ತು ಉತ್ತರ ದೆಹಲಿ ಜಿಲ್ಲೆಗಳಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ವಿವಿಧ ವಲಯಗಳನ್ನಾಗಿ ವಿಂಗಡಿಸಿದ್ದೇವೆ. ಡಿಸಿಪಿ ಅಥವಾ ಹೆಚ್ಚುವರಿ ಡಿಸಿಪಿ ಮಟ್ಟದ ಅಧಿಕಾರಿಗಳು ಪ್ರತಿಯೊಂದು ವಲಯದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಸಂಚಾರ ಪೊಲೀಸರ ಪ್ರಕಾರ, ಪರೇಡ್ ವಿಜಯ ಚೌಕ್, ಕರ್ತವ್ಯ ಪಥ, ಸಿ-ಹೆಕ್ಸಾಗನ್, ಸುಭಾಸ್ ಚಂದ್ರ ಬೋಸ್ ವೃತ್ತ, ತಿಲಕ್ ಮಾರ್ಗ, ಬಹದ್ದೂರ್ ಶಾ ಜಾಫರ್ ಮಾರ್ಗ, ನೇತಾಜಿ ಸುಭಾಸ್ ಮಾರ್ಗ ಮತ್ತು ಕೆಂಪು ಕೋಟೆಯ ಮೂಲಕ ಸಾಗಲಿದೆ. ರಾಷ್ಟ್ರೀಯ ಯುದ್ಧ ಸ್ಮಾರಕ, ಇಂಡಿಯಾ ಗೇಟ್‌ನಲ್ಲಿ ವಿವಿಧ ಕಾರ್ಯಕ್ರಮವಿರುತ್ತದೆ.

ಗಣರಾಜ್ಯೋತ್ಸವ ಪರೇಡ್‌ ಮುಗಿಯುವವರೆಗೆ ಇತರ ರಾಜ್ಯಗಳ ಯಾವುದೇ ಭಾರೀ ಮತ್ತು ಲಘು ಸರಕು ವಾಹನಗಳು ದೆಹಲಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ:ಪದ್ಮ ಪ್ರಶಸ್ತಿಗಳ ಪಟ್ಟಿ ಪ್ರಕಟ: ಕರ್ನಾಟಕದ 9 ಸಾಧಕರಿಗೆ ಗೌರವ, ಇಬ್ಬರು ಮಹಿಳೆಯರಿಗೂ ಒಲಿದ ಪ್ರಶಸ್ತಿಯ ಗರಿ

ABOUT THE AUTHOR

...view details