ಉದಕಮಂಡಲ (ತಮಿಳುನಾಡು): ದೇಶದೆಲ್ಲೆಡೆ ಸೂರ್ಯ ಕೆಂಡವಾಗಿದ್ದು, ಬಿಸಿಲಿನ ಪ್ರತಾಪಕ್ಕೆ ಜನ ಹೈರಾಣಾಗಿದ್ದಾರೆ. ಈ ತಾಪಮಾನದಿಂದ ರಕ್ಷಿಸಿಕೊಳ್ಳಲು ಪ್ರಸಿದ್ಧ ಗಿರಿಧಾಮವಾದ ಊಟಿಗೆ ಹೋಗುವ ಯೋಜನೆ ರೂಪಿಸಿದ್ರೆ ಮತ್ತೊಮ್ಮೆ ಯೋಚಿಸಿ. ಕಾರಣ ಈ ಬಾರಿ ಸೂರ್ಯನ ಶಾಖ ಉದಕಮಂಡಲವನ್ನು ಬಿಟ್ಟಿಲ್ಲ. ಬೇಸಿಗೆಯಲ್ಲೂ ತಂಪಾಗಿರುವ ತಮಿಳುನಾಡಿನ ಈ ಗಿರಿಧಾಮ ಈ ಬಾರಿ ಬಿಸಿಲಿಗೆ ತತ್ತರಿಸಿದೆ.
ಊಟಿ ಎಂದೇ ಖ್ಯಾತಿ ಪಡೆದಿರುವ ಉದಕಮಂಡಲದಲ್ಲಿ ಏಪ್ರಿಲ್ 29ರಂದು ಅತಿ ಹೆಚ್ಚು ತಾಪಮಾನ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಇಲ್ಲಿನ ಸಾಮಾನ್ಯ ತಾಪಮಾನಕ್ಕಿಂತ 5.4 ಡಿಗ್ರಿಯಷ್ಟು ಹೆಚ್ಚಳ ಎಂದು ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರ (ಆರ್ಎಂಸಿ) ಹೆಚ್ಚುವರಿ ಪ್ರಧಾನ ನಿರ್ದೇಶಕರಾಗಿರುವ ಎಸ್ ಬಾಲಚಂದ್ರನ್ ತಿಳಿಸಿದ್ದಾರೆ.
1986ರಲ್ಲಿ ಊಟಿಯಲ್ಲಿ ಅತಿ ಹೆಚ್ಚು ತಾಪಮಾನ ಅಂದರೆ 28.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದೀಗ ಈ ದಾಖಲೆ ಮುರಿದು 29 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ತಮಿಳುನಾಡಿನ ಉತ್ತರ ಒಳನಾಡಿನಲ್ಲಿ ಈಗಾಗಲೇ ಶಾಖದ ಅಲೆ ಪರಿಸ್ಥಿತಿ ಕುರಿತು ಆರ್ಎಂಸಿ ಎಚ್ಚರಿಕೆ ನೀಡಿದ್ದು, ಮೇ 3ರ ವರೆಗೆ ಬಿಸಿಲಿನ ತಾಪ ಹೆಚ್ಚಿದ್ದು, ಯೆಲ್ಲೋ ಆಲರ್ಟ್ ಘೋಷಿಸಲಾಗಿದೆ.
ತಮಿಳುನಾಡಿನ ಈರೋಡ್ನಲ್ಲಿ ಅತಿ ಹೆಚ್ಚು ತಾಪಮಾನ 42 ಡಿಗ್ರಿ ದಾಖಲಾಗಿದ್ದು, ಚೆನ್ನೈನಲ್ಲಿ 38.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇನ್ನು ಕನ್ಯಾಕುಮಾರಿ ಮತ್ತು ತಿರುನೆಲ್ವೆಲಿಯಲ್ಲಿ ಹಗುರ ಮಳೆಯಾಗುವ ನಿರೀಕ್ಷೆ ಇದೆ ಎಂದು ಮುನ್ಸೂಚನೆ ತಿಳಿಸಿದೆ.
ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ಪ್ರವಾಸಿಗರು ಊಟಿಯಂತಹ ತಂಪಾದ ಪ್ರದೇಶಗಳತ್ತ ಮುಖ ಮಾಡುತ್ತಾರೆ. ಆದರೆ ಈ ಬಾರಿ ಈ ಗಿರಿಧಾಮ ಕೂಡ ಬಿಸಿಲ ತಾಪಮಾನಕ್ಕೆ ತತ್ತರಿಸಿದ್ದು, ಯಾವುದೇ ತಂಪು ಅನುಭವ ಉಂಟಾಗುತ್ತಿಲ್ಲ ಎಂದು ವರದಿ ತಿಳಿಸಿದೆ.
ಪ್ರವಾಸಿಗರಿಗೆ ಇ-ಪಾಸ್ ಕಡ್ಡಾಯ: ಪಶ್ಚಿಮ ಘಟ್ಟಗಳಲ್ಲಿರುವ ನೀಲಗಿರಿ ಗಿರಿಶಿಖರದ ಪ್ರಮುಖ ಗಿರಿಧಾಮವಾಗಿರುವ ಊಟಿಯಲ್ಲಿ ಮೇ 10 ರಿಂದ ಹತ್ತು ದಿನಗಳ ಕಾಲ ಹೂವಿನ ಉತ್ಸವ ಜೊತೆಗೆ ಪ್ರವಾಸಿಗರ ಸೀಸನ್ ಪ್ರಾರಂಭವಾಗಲಿದೆ. ಇಲ್ಲಿ ಪ್ರವಾಸಿಗರ ಸಂಖ್ಯೆ ಕೂಡ ಗಿರಿಧಾಮಕ್ಕೆ ಹೆಚ್ಚಲಿದೆ. ಈ ಹಿನ್ನೆಲೆ ಇಲ್ಲಿನ ಕಡಿದಾದ ಪ್ರದೇಶಗಳಲ್ಲಿ ಪ್ರವಾಸಿಗರ ವಾಹನ ದಟ್ಟಣೆ ನಿರ್ವಹಣೆ ಉದ್ದೇಶಕ್ಕಾಗಿ, ವಾಹನಗಳ ಪ್ರವೇಶದ ಮೇಲೆ ನಿಗಾ ವಹಿಸಲು ಮೇ 7 ರಿಂದ ಜೂನ್ 30ರ ವರೆಗೆ ಗಿರಿಧಾಮಗಳಿಗೆ ಪ್ರವೇಶಿಸುವ ಎಲ್ಲಾ ವಾಹನಗಳಿಗೆ ಎಲೆಕ್ಟ್ರಾನಿಕ್ ಪಾಸ್ (ಇ-ಪಾಸ್) ನೀಡುವಂತೆ ಮದ್ರಾಸ್ ಹೈಕೋರ್ಟ್ ನೀಲಗಿರಿ ಮತ್ತು ದಿಂಡಿಗಲ್ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದೆ.
ಟೂರಿಸ್ಟ್ ಸೀಸನ್ನಲ್ಲಿ ಈ ಗಿರಿಧಾಮಕ್ಕೆ ಸರಾಸರಿ 11,509 ಕಾರುಗಳು, 1,341 ವ್ಯಾನ್ಗಳು, 637 ಬಸ್ಗಳು ಮತ್ತು 6,524 ದ್ವಿಚಕ್ರ ವಾಹನಗಳು ಆಗಮಿಸುತ್ತವೆ. ಸೀಸನ್ ಹೊರತಾದ ಸಮಯದಲ್ಲಿ 1,150 ಕಾರುಗಳು, 118 ವ್ಯಾನ್ಗಳು, 60 ಬಸ್ಗಳು ಮತ್ತು 674 ದ್ವಿಚಕ್ರ ವಾಹನಗಳು ಪ್ರವೇಶಿಸುತ್ತವೆ.
ಇದನ್ನೂ ಓದಿ:ಕೇರಳದಲ್ಲಿ ಹೆಚ್ಚಿದ ಬಿಸಿಲಿಗೆ ಇಬ್ಬರ ಸಾವು: ಹಲವು ಜಿಲ್ಲೆಗಳಲ್ಲಿ ಮೆ 2ರವರೆಗೆ ಸುಡುವ ತಾಪಮಾನ