ಹೈದರಾಬಾದ್: ತೆಲಂಗಾಣದ 1,864 ಸರ್ಕಾರಿ ಶಾಲೆಗಳಲ್ಲಿ ಒಬ್ಬೇ ಒಬ್ಬ ವಿದ್ಯಾರ್ಥಿಯೂ ಇಲ್ಲ ಎಂಬ ಕಳವಳಕಾರಿ ಮಾಹಿತಿ ಬಹಿರಂಗವಾಗಿದೆ. ಇನ್ನು 26,287 ಸರ್ಕಾರಿ ಶಾಲೆಗಳ ಪೈಕಿ ಕೇವಲ 5,367 ಶಾಲೆಗಳಲ್ಲಿ (20.41%) ಮಾತ್ರ 100 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದಾರೆ ಎಂದು ಶಿಕ್ಷಣ ಇಲಾಖೆಯ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ.
ರಾಜ್ಯ ಸರ್ಕಾರವು ಶಾಲಾ ನೈರ್ಮಲ್ಯದ ಜವಾಬ್ದಾರಿಯನ್ನು ಅಮ್ಮ ಆದರ್ಶ ಶಾಲಾ ಸಮಿತಿಗಳಿಗೆ ವಹಿಸಿದೆ. ಈ ನೈರ್ಮಲ್ಯ ಕಾರ್ಯಗಳಿಗಾಗಿ ಆಯಾ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಧನಸಹಾಯ ನೀಡಲಾಗುತ್ತದೆ. ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ (ಡಿಎಂಎಫ್ಟಿ) ನಿಂದ ನೈರ್ಮಲ್ಯ ಕಾರ್ಯಗಳಿಗಾಗಿ ಹಣ ಒದಗಿಸಲಾಗುತ್ತದೆ.
ಶಿಕ್ಷಣ ಇಲಾಖೆಯು ಶಾಲಾ ವಿದ್ಯಾರ್ಥಿಗಳ ಜಿಲ್ಲಾವಾರು ದತ್ತಾಂಶವನ್ನು ಗಣಿ ಇಲಾಖೆಗೆ ಒದಗಿಸಿದ್ದು, ಅದರ ಆಧಾರದ ಮೇಲೆ ಗಣಿ ನಿರ್ದೇಶಕ ಬಿಆರ್ವಿ ಸುಶೀಲ್ ಕುಮಾರ್ ಅವರು ಸಿಂಗರೇಣಿ ಕೊಲಿಯರೀಸ್ ಸಿಎಂಡಿಗೆ ಪತ್ರ ಬರೆದು ಡಿಎಂಎಫ್ಟಿ ಅಡಿ ಮೂರು ತಿಂಗಳಿಗೆ 40.83 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಕೋರಿದ್ದಾರೆ.