ಹೈದರಾಬಾದ್:ತೆಲಂಗಾಣ ಕಾಂಗ್ರೆಸ್ ಸರ್ಕಾರ ಇಂದು 2024ರ ಬಜೆಟ್ ಮಂಡಿಸಿದ್ದು, ಹಣಕಾಸು ಸಚಿವ ಭಟ್ಟಿ ವಿಕ್ರಮಾರ್ಕ ಅವರು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ, 72,659 ಕೋಟಿ ಘೋಷಣೆ ಮಾಡಿದ್ದಾರೆ. "ಸಾಲ ಮನ್ನಾ, ರೈತ ಭರೋಸಾ, ಕೃಷಿ ಕಾರ್ಮಿಕರಿಗೆ ಆರ್ಥಿಕ ನೆರವು ನೀಡುವ ವಿಚಾರಗಳನ್ನು ಪ್ರಸ್ತಾಪಿಸಿದ ವಿಕ್ರಮಾರ್ಕ ಯಾವ ಯಾವ ಕ್ಷೇತ್ರಗಳಿಗೆ ಎಷ್ಟು ಅನುದಾನ ನೀಡಲಾಗಿದೆ" ಎಂಬುದನ್ನು ವಿವರಿಸಿದರು.
ಉಪಮುಖ್ಯಮಂತ್ರಿಯೂ ಆಗಿರುವ ಹಣಕಾಸು ಸಚಿವ ಭಟ್ಟಿ ವಿಕ್ರಮಾರ್ಕ, "2024ರ ಬಜೆಟ್ನಲ್ಲಿ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳಿಗೆ ಹೆಚ್ಚಿನ ಹಣ ಮೀಸಲಿಡಲಾಗಿದೆ. ಕೃಷಿ ಕ್ಷೇತ್ರಕ್ಕೆ ಅತೀ ಹೆಚ್ಚು ಅಮರದೆ 72,659 ಕೋಟಿ ರೂ., ಪಶುಸಂಗೋಪನಾ ಇಲಾಖೆಗೆ 1,980 ಕೋಟಿ ರೂ. ಹಾಗೂ ಉದ್ಯಾನಗಳಿಗೆ 737 ಕೋಟಿ ರೂ. ನೀಡಲಾಗುವುದು" ಎಂದು ಘೋಷಿಸಿದ್ದಾರೆ.
"ವರಂಗಲ್ ರೈತ ಘೋಷಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೀಡಿದ ಭರವಸೆಯಂತೆ ರೈತರ 2 ಲಕ್ಷ ರೂ. ಸಾಲ ಮನ್ನಾ ಮಾಡಲಾಗುವುದು. ಇದರ ಭಾಗವಾಗಿ ಏಕಕಾಲದಲ್ಲಿ 31,000 ಕೋಟಿ ಸಾಲವನ್ನು ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ" ಎಂದು ಭಟ್ಟಿ ಹೇಳಿದರು.
"ಹಿಂದಿನ ಸರ್ಕಾರ ಜಾರಿಗೆ ತಂದ ರೈತ ಬಂಧು ಯೋಜನೆಯಡಿ 80,440 ಕೋಟಿ ರೂ. ಹಣವನ್ನು ರೈತರಿಗೆ ನೀಡಲಾಗಿತ್ತು. ಅರ್ಹ ರೈತರಿಗೆ ಮಾತ್ರ ಅನುಕೂಲವಾಗುವಂತೆ, ನಮ್ಮ ಸರ್ಕಾರ ರೈತ ಬಂಧು ಬದಲಾಗಿ, ರೈತ ಭರೋಸಾ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಅರ್ಹ ರೈತರಿಗೆ ವಾರ್ಷಿಕವಾಗಿ ಎಕರೆಗೆ 15 ಸಾವಿರ ರೂ.ಗಳನ್ನು ನೀಡಲು ನಿರ್ಧರಿಸಲಾಗಿದೆ. ಧರಣಿ ಪೋರ್ಟಲ್ ಸಮಸ್ಯೆಗಳ ಕುರಿತು ಅಧ್ಯಯನ ವರದಿಯ ನಂತರ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸಲಾಗುವುದು." ಎಂದು ತಿಳಿಸಿದರು.