ಉತ್ತರಕಾಶಿ:ಇಲ್ಲಿನ ಉತ್ತರಕಾಶಿ-ತೆಹ್ರಿ ಜಿಲ್ಲೆಯ ಗಡಿಯಲ್ಲಿರುವ ಸಹಸ್ತ್ರತಾಲ್ ಪರ್ವತಾರೋಹಣಕ್ಕೆ ತೆರಳಿ ಸಾವನ್ನಪ್ಪಿದ್ದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಐವರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಇವರೆಲ್ಲರೂ ಕರ್ನಾಟಕದವರು ಆಗಿದ್ದಾರೆ. ನಾಪತ್ತೆಯಾದ ಇನ್ನೂ ನಾಲ್ವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಹಿಮದಲ್ಲಿ ಸಿಲುಕಿದ್ದ 11 ಜನರನ್ನು ರಕ್ಷಣೆ ಮಾಡಲಾಗಿದೆ.
ಕರ್ನಾಟಕದ 18, ಮಹಾರಾಷ್ಟ್ರ ಒಬ್ಬ ಮತ್ತು ಮೂವರು ಸ್ಥಳೀಯ ಮಾರ್ಗದರ್ಶಕರು ಸೇರಿ ಒಟ್ಟು 22 ಜನರ ತಂಡ ಪರ್ವತಾರೋಹಣಕ್ಕೆ ತೆರಳಿತ್ತು. ಈ ವೇಳೆ ಹವಾಮಾನ ವೈಪರೀತ್ಯ ಉಂಟಾಗಿದೆ. ಇದರಿಂದ ಹಿಮದಲ್ಲಿ ಸಿಲುಕಿ ಐದು ಮಂದಿ ಅಸುನೀಗಿದ್ದಾಗಿ ವರದಿಯಾಗಿದೆ.
22 ಸದಸ್ಯರ ಟ್ರೆಕ್ಕಿಂಗ್ ತಂಡವು ಮೇ 29ರಂದು ಮನೇರಿಯ ಹಿಮಾಲಯನ್ ವ್ಯೂ ಟ್ರೆಕ್ಕಿಂಗ್ ಏಜೆನ್ಸಿ ಮುಖಾಂತರವಾಗಿ ಮಲ್ಲ-ಸಿಲ್ಲಾ-ಕುಷ್ಕಲ್ಯಾಣ-ಸಹಸ್ತ್ರತಾಲ್ಗೆ ಟ್ರೆಕ್ಕಿಂಗ್ಗೆ ತೆರಳಿತ್ತು. ಈ ತಂಡವು ಜೂನ್ 7ರೊಳಗೆ ಹಿಂತಿರುಗಬೇಕಿತ್ತು. ಟ್ರೆಕ್ಕಿಂಗ್ ತಂಡ ಮಂಗಳವಾರ ಸಹಸ್ತ್ರತಾಲ್ಗೆ ಹಿಂತಿರುಗಿದ್ದ ವೇಳೆ ಹಠಾತ್ ಹವಾಮಾನ ಬದಲಾಗಿಯಾಗಿದೆ. ದಟ್ಟವಾದ ಮಂಜು ಮತ್ತು ಹಿಮಪಾತದ ನಡುವೆ ಸಿಲುಕಿಕೊಂಡಿದ್ದಾರೆ. ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಚಾರಣಿಗರು ಇಡೀ ರಾತ್ರಿ ಚಳಿಯಲ್ಲಿ ಸಿಲುಕಿಕೊಂಡಿದ್ದರು.