ಚೆನ್ನೈ/ಪುದುಚೇರಿ:ಒಳಚರಂಡಿ ಕಾಮಗಾರಿಯ ವೇಳೆ ಕಟ್ಟಡದ ಗೋಡೆ ಕುಸಿದು ಮೂವರು ಕಾರ್ಮಿಕರು ಸಾವಿಗೀಡಾಗಿ, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಭಾನುವಾರ ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುದುಚೇರಿಯ ಮರಪಾಲಂ, ವಸಂತನಗರ ಪ್ರದೇಶದಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಇಂದು (ಭಾನುವಾರ) ಬೆಳಗ್ಗೆ 16 ಮಂದಿ ಕಾರ್ಮಿಕರು ಈ ಕಾರ್ಯದಲ್ಲಿ ತೊಡಗಿದ್ದರು. ಚರಂಡಿಯ ಮಣ್ಣು ತೆಗೆದು ಗೋಡೆ ನಿರ್ಮಿಸುವ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಪುದುಚೇರಿ ವಿದ್ಯುತ್ ಇಲಾಖೆಗೆ ಸೇರಿದ 33 ವರ್ಷಗಳಷ್ಟು ಹಳೆಯದಾದ ಗೋಡೆಯು ಹಠಾತ್ತನೆ ಕುಸಿದಿದೆ. ಗೋಡೆಯ ಅವಶೇಷಗಳು ಕಾರ್ಮಿಕರ ಮೇಲೆ ಬಿದ್ದಿದ್ದು, ಅದರಡಿ ಅವರು ಸಿಲುಕಿದ್ದರು.
ವಿಷಯ ತಿಳಿದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ತಕ್ಷಣವೇ ಧಾವಿಸಿ ಬಂದು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಅವಶೇಷಗಳಡಿ ಸಿಲುಕಿದ ಮೂವರನ್ನು ರಕ್ಷಿಸಲಾಗಿದೆ. ಅವರು ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಆಂಬ್ಯುಲೆನ್ಸ್ ಸಕಾಲಕ್ಕೆ ಬಾರದ ಕಾರಣ ಗಾಯಾಳು ಕಾರ್ಮಿಕರನ್ನು ಮಿನಿ ಟ್ರಕ್‌ನಲ್ಲಿ ಸಾಗಿಸಲಾಯಿತು.