ನವದೆಹಲಿ:2023 ರ ಡಿಸೆಂಬರ್ನಲ್ಲಿ ಮಿಚಾಂಗ್ ಚಂಡಮಾರುತದಿಂದ ಉಂಟಾದ ಹಾನಿಗೆ ಪರಿಹಾರವಾಗಿ 19,692.69 ಕೋಟಿ ರೂ. ಧನಸಹಾಯ ಬಿಡುಗಡೆ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ತೀವ್ರ ಸ್ವರೂಪದ ಬರಗಾಲದ ಕಾರಣದಿಂದ 35,162 ಕೋಟಿ ರೂ. ಪರಿಹಾರಧನ ಬಿಡುಗಡೆ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಕರ್ನಾಟಕ ಸರ್ಕಾರ ಈ ಹಿಂದೆಯೇ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದೆ. ಅದರ ಬೆನ್ನಲ್ಲೇ ಈಗ ತಮಿಳು ಸರ್ಕಾರ ಕೂಡ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಡಿಸೆಂಬರ್ 17-18 ರಂದು ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ಹಾನಿಗೆ ಆರ್ಥಿಕ ಸಹಾಯವಾಗಿ 18,214.52 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಕೋರಿ ತಮಿಳು ನಾಡು ಸರ್ಕಾರವು 2023 ರ ಡಿಸೆಂಬರ್ 26 ರಂದು ಕೇಂದ್ರ ಹಣಕಾಸು ಸಚಿವರಿಗೆ ಮನವಿ ಸಲ್ಲಿಸಿತ್ತು. ಈ ಮನವಿಯನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ತಮಿಳು ನಾಡು ಸರ್ಕಾರ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆ.
ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ಅಂತರ್ ಸಚಿವಾಲಯದ ಕೇಂದ್ರ ತಂಡ (ಐಎಂಸಿಟಿ)ಕ್ಕೆ 2023 ರ ಡಿಸೆಂಬರ್ 14 ರಂದು ಸಲ್ಲಿಸಿದ ಮತ್ತೊಂದು ಮನವಿಯನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೂಡ ತಮಿಳು ನಾಡು ಸರ್ಕಾರ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆ. ಮಧ್ಯಂತರ ಪರಿಹಾರವಾಗಿ 2000 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಈ ಅರ್ಜಿಯಲ್ಲಿ ಕೋರಲಾಗಿದೆ.
ಹಲವಾರು ಬಾರಿ ವಿನಂತಿ ಮಾಡಿಕೊಂಡರೂ ಕೇಂದ್ರ ಸರ್ಕಾರ ಪರಿಹಾರ ಧನ ಬಿಡುಗಡೆ ಮಾಡಿಲ್ಲ ಮತ್ತು ಇದು ಪೀಡಿತ ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ. ಐಎಂಸಿಟಿ ತಂಡವು ಚಂಡಮಾರುತ ಪೀಡಿತ ಜಿಲ್ಲೆಗಳು ಮತ್ತು ಪ್ರವಾಹ ಪೀಡಿತ ದಕ್ಷಿಣ ಜಿಲ್ಲೆಗಳಿಗೆ ಭೇಟಿ ನೀಡಿ ರಾಜ್ಯದ ಪರಿಸ್ಥಿತಿಯ ಸಮಗ್ರ ಮೌಲ್ಯಮಾಪನ ಮಾಡಿದೆ ಎಂದು ಮೊಕದ್ದಮೆಯಲ್ಲಿ ವಾದಿಸಲಾಗಿದೆ
ಸಂವಿಧಾನದ 131ನೇ ವಿಧಿಯಡಿ ಹಿರಿಯ ವಕೀಲರುಗಳಾದ ಪಿ. ವಿಲ್ಸನ್ ಮತ್ತು ಡಿ. ಕುಮನನ್ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ.
ರಾಜ್ಯಕ್ಕೆ ಆರ್ಥಿಕ ನೆರವು ಬಿಡುಗಡೆ ಮಾಡುವ ವಿಷಯದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದ ಭಾರತ ಸರ್ಕಾರದ ನಿಷ್ಕ್ರಿಯತೆಯು ಮೇಲ್ನೋಟಕ್ಕೆ ಕಾನೂನುಬಾಹಿರ, ನಿರಂಕುಶ ಮತ್ತು ಭಾರತದ ಸಂವಿಧಾನದ 14 ಮತ್ತು 21 ನೇ ವಿಧಿಯ ಅಡಿಯಲ್ಲಿ ತನ್ನ ನಾಗರಿಕರಿಗೆ ಖಾತರಿಪಡಿಸಿದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಮೊಕದ್ದಮೆಯಲ್ಲಿ ತಿಳಿಸಲಾಗಿದೆ.
ತಜ್ಞರು, ಐಎಂಸಿಟಿ ತಂಡ ಮತ್ತು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಉಪಸಮಿತಿಯು ಮೌಲ್ಯಮಾಪನ ಮಾಡಿದರೂ ಹಣವನ್ನು ಬಿಡುಗಡೆ ಮಾಡದ ಕಾರಣ ಕೇಂದ್ರ ಸರ್ಕಾರದಿಂದ ಅನ್ಯಾಯವಾಗಿದೆ ಎಂದು ರಾಜ್ಯವು ಹೇಳಿಕೊಂಡಿದೆ. ಜ್ಞಾಪಕ ಪತ್ರಗಳನ್ನು ಸಲ್ಲಿಸಿದ ದಿನಾಂಕದಿಂದ ಸುಮಾರು ಮೂರು ತಿಂಗಳು ಕಳೆದರೂ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ ನೆರವು ನೀಡುವ ಬಗ್ಗೆ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ರಾಜ್ಯ ಸರ್ಕಾರ ವಾದಿಸಿದೆ.
ಇದನ್ನೂ ಓದಿ : ಹೈಕೋರ್ಟ್ ಪೀಠದ ಮುಂದೆ ಗಾಯ ಮಾಡಿಕೊಂಡ ವ್ಯಕ್ತಿ, ಆಸ್ಪತ್ರೆಗೆ ದಾಖಲು - High Court