ತಮಿಳುನಾಡು:ಶ್ರೀಲಂಕಾ ನೌಕಾಪಡೆಯ ದೋಣಿಯು ಮೀನುಗಾರರ ದೋಣಿಯನ್ನು ವಶಪಡಿಸಿಕೊಳ್ಳಲು ಹೋದ ಸಂದರ್ಭದಲ್ಲಿ ತಮಿಳುನಾಡು ದೋಣಿ ಸಮುದ್ರದಲ್ಲಿ ಮಗುಚಿ ಓರ್ವ ಮೀನುಗಾರ ಸಾವನ್ನಪ್ಪಿ, ಇನ್ನೋರ್ವ ನಾಪತ್ತೆಯಾಗಿರುವ ಘಟನೆ ಇಲ್ಲಿನ ರಾಮನಾಥಪುರಂನಲ್ಲಿ ನಡೆದಿದೆ.
ರಾಮೇಶ್ವರಂ ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆ ಪರವಾನಗಿ ಪಡೆಯಲು 359 ದೋಣಿಗಳಲ್ಲಿ ಮೀನುಗಾರರು ನಿನ್ನೆ ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ನೆಡುಂತೀವು ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಶ್ರೀಲಂಕಾ ನೌಕಾಪಡೆಯ ದೋಣಿ ಅಕ್ರಮ ಮೀನುಗಾರಿಕೆ ನಡೆಸುತ್ತಿದೆ ಎಂದು ಆರೋಪಿಸಿ ತಮಿಳುನಾಡು ಮೀನುಗಾರರ ದೋಣಿಯನ್ನು ವಶಪಡಿಸಿಕೊಳ್ಳಲು ಯತ್ನಿಸಿದೆ. ಈ ವೇಳೆ ನೌಕಾಪಡೆಯ ದೋಣಿ ಹಾಗೂ ಮೀನುಗಾರರ ದೋಣಿ ನಡುವೆ ಘರ್ಷಣೆಯಾಗಿ ಮೀನುಗಾರರ ದೋಣಿ ಸಮುದ್ರದಲ್ಲಿ ಮಗುಚಿ ಬಿದ್ದಿದೆ.
ಸಂಪೂರ್ಣವಾಗಿ ಸಮುದ್ರದಲ್ಲಿ ಮುಳುಗಿದ್ದರಿಂದ ದೋಣಿಯಲ್ಲಿದ್ದ ವಿರುದುನಗರ ಜಿಲ್ಲೆಯ ನಲ್ಲಂಕುಳಂ ಪ್ರದೇಶದ ಮೂಖಯ್ಯ (54), ರಾಮೇಶ್ವರಂ ನಿವಾಸಿ ಮುತ್ತು ಮುನಿಯಾಂಡಿ (57), ಮಲೈಚಾಮಿ (59), ರಾಮಚಂದ್ರನ್ (64) ಮೀನುಗಾರರು ನಾಪತ್ತೆಯಾಗಿದ್ದರು. ಮೀನುಗಾರರು ದಡಕ್ಕೆ ಮರಳದ ಕಾರಣ ಸಹ ಮೀನುಗಾರರು ನಾಪತ್ತೆಯಾಗಿರುವ ಮೀನುಗಾರರಿಗಾಗಿ ಸಮುದ್ರದಲ್ಲಿ ಹುಡುಕಾಟ ನಡೆಸಿದ್ರು. ಬಳಿಕ ಮೀನುಗಾರರು ಮೀನುಗಾರಿಕೆ ಇಲಾಖೆ ಕಚೇರಿಗೆ ದೂರು ನೀಡಿದ್ದರು.