ನವದೆಹಲಿ:ದೆಹಲಿ ಮದ್ಯ ನೀತಿ ಹಗರಣ, ಭ್ರಷ್ಟಾಚಾರ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.
ಆಗಸ್ಟ್ 6 ರಂದು ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಸಿಸೋಡಿಯಾ ಪರ ವಕೀಲ ಅಭಿಷೇಕ್ ಸಿಂಘ್ವಿ ಮತ್ತು ಸಿಬಿಐ ಮತ್ತು ಇಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರ ವಾದವನ್ನು ನ್ಯಾಯಾಲಯ ಆಲಿಸಿತ್ತು. ಮೇ 21ರಂದು ದೆಹಲಿ ಹೈಕೋರ್ಟ್ ಸಿಸೋಡಿಯಾಗೆ ಜಾಮೀನು ನೀಡಲು ನಿರಾಕರಿಸಿತ್ತು. ಏಕೆಂದರೆ, ಸ್ಥಾನದ ದುರುಪಯೋಗವಾಗಬಹುದು. ಸಿಸೋಡಿಯಾ ಹೊರಗೆ ಬಂದು ಸಾಕ್ಷ್ಯ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಹೈಕೋರ್ಟ್ ಹೇಳಿತ್ತು.
17 ತಿಂಗಳುಗಳಿಂದ ಬಂಧನದಲ್ಲಿರುವ ಸಿಸೋಡಿಯಾ:
- ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಫೆಬ್ರವರಿ 26, 2023ರಿಂದ ಬಂಧನದಲ್ಲಿದ್ದಾರೆ.
- ದೆಹಲಿ ಮದ್ಯ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಫೆಬ್ರವರಿ 26, 2023 ರಂದು ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು.
- ಸಿಬಿಐ ಎಫ್‌ಐಆರ್‌ಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಇ.ಡಿ ಮನೀಶ್ ಸಿಸೋಡಿಯಾ ಅವರನ್ನು ಮಾರ್ಚ್ 9, 2023 ರಂದು ಬಂಧಿಸಿತ್ತು.
- ಮನೀಶ್ ಸಿಸೋಡಿಯಾ ಅವರು ಫೆಬ್ರವರಿ 28, 2023 ರಂದು ದೆಹಲಿ ಸಚಿವ ಸಂಪುಟಕ್ಕೆ ತಮ್ಮ ರಾಜೀನಾಮೆ ಸಲ್ಲಿಸಿದ್ದರು.