ನವದೆಹಲಿ :ಪೂಜಾ ಸ್ಥಳಗಳ ಕಾಯ್ದೆ -1991ರ ಪರಿಣಾಮಕಾರಿ ಅನುಷ್ಠಾನಕ್ಕೆ ಕೋರಿ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿ ಸಂಜಯ್ ಕುಮಾರ್ ಪೀಠದ ಮುಂದೆ ಈ ವಿಷಯ ಬಂದಿತು. ಓವೈಸಿ ಪರ ವಕೀಲ ನಿಜಾಮ್ ಪಾಷಾ ವಾದ ಮಂಡಿಸಿದರು. ನ್ಯಾಯಾಲಯವು ಈ ವಿಷಯದ ಬಗ್ಗೆ ವಿವಿಧ ಮನವಿಗಳನ್ನು ಸ್ವೀಕರಿಸಿದೆ ಮತ್ತು ಹೊಸ ಅರ್ಜಿಯನ್ನ ಬಾಕಿ ಪ್ರಕರಣಗಳೊಂದಿಗೆ ಸೇರಿಸಬಹುದು ಎಂದು ಪೀಠ ಹೇಳಿದೆ.
ಮನವಿ ಆಲಿಸಿದ ನ್ಯಾಯಮೂರ್ತಿಗಳು, ಓವೈಸಿಯ ಹೊಸ ಮನವಿಯನ್ನು ಈ ವಿಷಯದ ಕುರಿತು ಬಾಕಿ ಇರುವ ಪ್ರಕರಣಗಳೊಂದಿಗೆ ಸೇರಿಸಿ ಎಂದು ಹೇಳಿದ್ದಾರೆ. ಫೆಬ್ರವರಿ 17 ರಂದು ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ಪೀಠ ಹೇಳಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ವಕೀಲ ಫುಜೈಲ್ ಅಹ್ಮದ್ ಅಯ್ಯುಬಿ ಮೂಲಕ ಅರ್ಜಿ ಸಲ್ಲಿಸಲಾಗಿತ್ತು.